

Car Accident : ಹೊಸ ಕನಸುಗಳೊಂದಿಗೆ ಆರಂಭವಾಗಿರುವ ಹೊಸ ವರ್ಷದಲ್ಲಿ, ಅದರಲ್ಲೂ ಮೊದಲ ದಿನವೇ ಇಬ್ಬರ ಬದುಕು ಅಂತ್ಯಗೊಂಡಿದೆ.
ಗುಂಡ್ಲುಪೇಟೆ ತಾಲೂಕಿನಲ್ಲಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಮತ್ತೋರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಯಲ್ಲಿ ಕಂದೇಗಾಲ ಸಮೀಪದಲ್ಲಿ ಅಪಘಾತ ನಡೆದಿದೆ. ಕೊಡಸೋಗೆ ಗ್ರಾಮದ ಕೊಂಗಳ್ಳಯ್ಯ ಹಾಗೂ ಮಂಡ್ಯ ಮೂಲದ ಮತ್ತೊಬ್ಬ ಮೃತಪಟ್ಟಿದ್ದಾನೆ. ಗಾಯಾಳು ಸಹ ಮಂಡ್ಯದವನಾಗಿದ್ದಾನೆ.
ಏರ್ ಬ್ಯಾಗ್ ಇದ್ದರೂ ಪ್ರಯೋಜನವಾಗಲಿಲ್ಲ: ಅತಿ ವೇಗವಾಗಿ ಬಂದಿರುವ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಏರ್ ಬ್ಯಾಗ್ ಓಪನ್ ಆಗಿದ್ದರೂ ಸಹ ಕಾರಿನ ಮುಂಭಾಗದಲ್ಲಿದ್ದ ಇಬ್ಬರೂ ಬದುಕುಳಿದಿಲ್ಲ. ಹಿಂಬದಿ ಕುಳಿತಿದ್ದವನಿಗೆ ಗಾಯಗಳಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾರಿನೊಳಗಿದ್ದ ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.