

| ರಾಜಗುರು ಬಿ.ಎಸ್. ದ್ವಾರಕಾನಾಥ್ ( Dwarakanath Guruji Predictions )
ಭಾರತೀ ಕರುಣಾ ಪಾತ್ರಂ ಭಾರತೀ ಪದ ಭೂಷಣಂ ॥
ಭಾರತೀ ಪರಮಾರೂಢಂ ಭಾರತೀ ತೀರ್ಥಮಾಶ್ರಯೇ ॥
ವಿದ್ಯಾವಿನಯ ಸಂಪನ್ನಂ ವೀತರಾಗಂ ವಿವೇಕಿನಂ
ವಂದೇ ವೇದಾಂತ ತತ್ವಜ್ಞಂ ವಿಧುಶೇಖರ ಭಾರತೀಂ॥
ಹಿಂದೂ ಪರಂಪರೆ ಪ್ರಕಾರ ಹೊಸ ವರ್ಷಾಚರಣೆ ಯುಗಾದಿ ಎಂದಾದರೂ ಇಡೀ ವಿಶ್ವದಲ್ಲಿ ಆಂಗ್ಲ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ ಆರಂಭವಾಗಿದೆ. 2025ರಲ್ಲಿ ನಡೆಯಬಹುದಾದ ಆಗುಹೋಗುಗಳನ್ನು ಸಮಗ್ರವಾಗಿ ವಿಶ್ಲೇಷಿಸುವುದಾದರೆ ಭಾರತಕ್ಕೆ ಒಳಿತು ಹೆಚ್ಚೆಂಬಂತೆ ಕಾಣಿಸುತ್ತಿದೆ. ಈಗ ನಡೆಯುತ್ತಿರುವ ಕ್ರೋಧಿ ಸಂವತ್ಸರ ಕೊನೆಯ ಹಂತ ತಲುಪಿದ್ದು, ಇದರಲ್ಲಿ ಅನುಭವಿಸಿದ ಕಷ್ಟ ನಷ್ಟಕ್ಕಿಂತ ಮುಂದೆ ಬರುವ ವಿಶ್ವಾವಸು ಸಂವತ್ಸರದಲ್ಲಿ ನಾಯಕ ಸೂರ್ಯ, ಮಂತ್ರಿ ಚಂದ್ರನಾಗಿರುವ ಕಾರಣ ಕೊಂಚ ಸಮಾಧಾನ ಸಿಗಬಹುದು.
ಗ್ರಹಗಳ ಚಲನೆ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ. ಗ್ರಹಮೇಳದ ಬಗ್ಗೆ ನಮ್ಮ ಹಿರಿಯರು, ಋಷಿಮುನಿಗಳು ವಿಶ್ಲೇಷಿಸಿದ್ದಾರೆ. ಈಗಲೂ ಅದೇ ಪರಂಪರೆ ಮುಂದುವರಿದಿದೆ. ಶನಿ, ಗುರು, ರಾಹು-ಕೇತು ಸಂಚಾರ ಅತ್ಯಂತ ಮುಖ್ಯ. ಮಾ. 30ರಂದು ಹೊಸ ಸಂವತ್ಸರ ಆರಂಭ. ನಂತರ ಸೂರ್ಯನೇ ಅಧಿದೇವತೆ. ಜ. 15ರ ಬಳಿಕ ಸೂರ್ಯ ಪಥ ಬದಲಿಸಿ ಮಕರ ರಾಶಿಗೆ ಬರುತ್ತಾನೆ. ಮಾ. 29ಕ್ಕೆ ಶನಿ ಬದಲಾಗುತ್ತಾನೆ. ಮೇಷ ರಾಶಿ ಅಶ್ವಿನಿ ನಕ್ಷತ್ರದಲ್ಲಿ ಮುಂದಿನ ಮನೆಗೆ ಪ್ರವೇಶಿಸುತ್ತಾನೆ. ಮೇ 13ರಂದು ಮಂಗಳವಾರ ಗುರು ಮಿಥುನ ರಾಶಿಗೆ ಬರುತ್ತಾನೆ. ಶನಿ ಬರುವುದು ಗುರುಮನೆಗೆ. ಗುರು ಹೋಗುವುದು ಬುಧನ ಮನೆಗೆ. ಧರ್ಮ ಕರ್ಮಾಧಿಪತಿ ಶನಿ ತಾನು ಏನೆಂದು ತೋರಿಸುತ್ತಾನೆ. ಮನುಷ್ಯರು ಮಾಡುವ ಪಾಪಗಳಿಗೆ ಉತ್ತರ ಕೊಡುವುದಕ್ಕಾಗಿಯೇ ಶನಿ ಸಿದ್ಧನಿರುತ್ತಾನೆ. ಹೀಗಿರುವಾಗ ರಾಜ್ಯ, ರಾಷ್ಟ್ರ ಆಳುವವರು ಎಚ್ಚರ ತಪ್ಪಿದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ.
ಗ್ರಹಗಳ ಚಲನೆಯು ದೇಶದಲ್ಲಿ ಮಹತ್ವದ ಬದಲಾವಣೆಗಳಿಗೆ, ವಿಪರೀತಗಳಿಗೆ, ಪ್ರಜೆಗಳನ್ನು ಕಾಪಾಡುವ, ಕಾಡುವ, ಯುದ್ಧ ಭೀತಿಗೆ ಕಾರಣವಾಗಬಹುದು. ಇಡೀ ಪ್ರಪಂಚದಲ್ಲೀ ಆರ್ಥಿಕ ವ್ಯತ್ಯಾಸ ಮುಂದುವರಿಯಲಿದೆ. ಇದ್ದಿದ್ದರಲ್ಲಿ ಭಾರತದ ಸ್ಥಿತಿಯೇ ಸಮಾಧಾನಕರ. ಇದೇ ಸ್ಥಿತಿ ಮುಂದುವರಿಯಲಿದೆ. ಶನಿ ಗ್ರಹ ಬದಲಿಸುವ ಮಾ. 29 ಒಂದು ಘಟ್ಟವಾದರೆ ಮೇ 13 ಗುರು ಮಿಥುನ ರಾಶಿಗೆ ಹೋಗುವುದು ಮತ್ತೊಂದು ಘಟ್ಟ. ಮುಂದಿನ ಯುಗಾದಿಯೊಳಗೆ ಎರಡು ಸೂರ್ಯಗ್ರಹಣ, ಎರಡು ಚಂದ್ರಗ್ರಹಣ ಇವೆ. ಇದರಿಂದ ಒಂದಷ್ಟು ಕಂಪನ ಆಗಬಹುದು. ದೇಶದ ರಾಜಕೀಯದಲ್ಲಿ ಬದಲಾವಣೆ, ಏರುಪೇರು, ಒಡಕುಗಳು ನಿಶ್ಚಿತ.
ಕ್ರೋಧಿನಾಮ ಸಂತ್ಸರದಲ್ಲಿ ದೇಶದೆಲ್ಲೆಡೆ ಕಲಹ, ಜಗಳ, ಹೊಡೆದಾಟ, ಹೆಣ್ಣಿನ ವಿಚಾರದಲ್ಲಿ ರಕ್ಷಿಸಲಾಗದಂಥ ಘಟನೆಗಳು ನಡೆದವು. ಗ್ರಹಗಳ ಸಂಚಾರದಿಂದಾದ ಘಟನೆಗಳು ಅವು. 2024ರಲ್ಲಿ ಆಳುವ ಪಕ್ಷಕ್ಕೆ ಪೂರ್ಣ ಬಹುಮತ ಬರಲಿಲ್ಲ. ಅಧಿಕಾರ ಹಿಡಿಯಲು ಅನ್ಯರ ಮರ್ಜಿ ಕಾಯಬೇಕಾಯಿತು. ಈಗಲೂ ತನ್ನ ಬಲ ಉಳಿಸಿಕೊಳ್ಳಲು ಹೋರಾಡುವಂತಾಗಿದೆ. ಶನಿ ಕುಂಭ ರಾಶಿಯಲ್ಲಿದ್ದು ಚುನಾವಣೆ ಬಗ್ಗೆಯೇ ಅನುಮಾನ ಮೂಡುವಂತಾಯಿತು.
ಈಗಲೂ ಶನಿ ಕುಂಭದಲ್ಲಿದ್ದು, ಗುರು ವೃಷಭ ರಾಶಿಯಲ್ಲಿದ್ದಾನೆ. ರಾಹು-ಕೇತು ಮೀನ, ಕನ್ಯಾ ರಾಶಿಯಲ್ಲಿರುವ ಪ್ರಭಾವದ ಪ್ರಕಾರ ಮಾ. 29ರವರೆಗೂ ರಾಜಕೀಯ ಪಕ್ಷಗಳು ಪ್ರಜಾಕಲ್ಯಾಣದಿಂದ ವಿಮುಖವಾಗಿ ಅನ್ಯ ವಿಷಯಗಳ ಬಗ್ಗೆ ಆಸಕ್ತಿ ಹೊಂದಿರುತ್ತವೆ. ಅಧಿಕಾರ ಉಳಿಸಿಕೊಳ್ಳುವಲ್ಲಿ ನಿರತವಾಗಿರುತ್ತವೆ.
ಆಳುವ ಸರ್ಕಾರ ಎಲ್ಲವನ್ನೂ ಗೆದ್ದು ಬಿಟ್ಟೆವೆಂದು ಬೀಗಲು ಆಗುವುದಿಲ್ಲ. ಶನಿ-ರವಿ ವಿರೋಧಗಳು ಮತ್ತು ಏ. 13ರ ಬಳಿಕ ಆಳುವವರಿಗೆ ಗುರುಬಲ ಹೊರಟುಹೋಗುತ್ತದೆ. ದೇಶಕ್ಕೆ ಗುರುಬಲ ಹೋಗದು, ಆಳುವವರಿಗೆ ಗುರುಬಲ ಹೋಗುತ್ತದೆ. ವಿರೋಧ ಪಕ್ಷ ಬಲಯುತವಾಗುತ್ತದೆ. ನರೇಂದ್ರ ಮೋದಿ 75 ವರ್ಷ ತಲುಪಲಿದ್ದು, ಪ್ರಧಾನಿ ಸ್ಥಾನದಲ್ಲಿ ಮುಂದುವರಿಯುತ್ತಾರೆಯೇ, ಬಿಟ್ಟು ಹೊರಡುತ್ತಾರೆಯೇ ಎಂಬ ಕುತೂಹಲ ಈ ವರ್ಷದಲ್ಲಿ ಸ್ಪಷ್ಟವಾಗಲಿದೆ. ಬಿಜೆಪಿ ಸರಾಗವಾಗಿ ಆಡಳಿತ ನಡೆಸಿಕೊಂಡು ಹೋಗಲು ಆಗುತ್ತಾ ಎಂಬುದೇ ಪ್ರಶ್ನೆ. ಬೇಕೋ ಬೇಡವೋ ರೈತರು ಎದ್ದು ನಿಲ್ಲುತ್ತಾರೆ, ನಿರುದ್ಯೋಗ ಕಾಡುತ್ತದೆ. 2026ರಲ್ಲಿ ಗುರು ಬದಲಾವಣೆ ಮಹತ್ವದ ಘಟ್ಟ. ಆಗ ಎದುರಾಗಬಹುದಾದ ಸನ್ನಿವೇಶವನ್ನು ಅಂದಾಜಿಸಿ ಈಗಿನಿಂದಲೇ ರಕ್ಷಣಾ ಕ್ಷೇತ್ರಕ್ಕೆ ಸರ್ಕಾರ ಒತ್ತು ಕೊಡಬೇಕು.
2025ರಲ್ಲಿ ಎರಡು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಲ್ಲಿ ಯಾವುದೇ ಪಕ್ಷಗಳು ಅಧಿಕಾರಕ್ಕೇರುವುದು ಸಲೀಸಲ್ಲ. ಬಿಹಾರದ ಚುನಾವಣೆ ಮೇಲೆ ದೇಶದ ರಾಜಕೀಯದ ಭವಿಷ್ಯದ ಲೆಕ್ಕಾಚಾರ ನಿರ್ಧಾರವಾಗಲಿದೆ. ನಿರ್ಣಾಯಕ ಭವಿಷ್ಯ ಎಂದು ಕರೆಯಲೂಬಹುದು. ತಮಿಳುನಾಡಿನಲ್ಲಿ ರಾಜಕಾರಣದ ದಿಕ್ಕೇ ಬದಲಾಗುತ್ತದೆ. ಕೇರಳದಲ್ಲೂ ಚಿತ್ರಣ ಬದಲಾಗುತ್ತದೆ. ಮಹಾರಾಷ್ಟ್ರ ಸರ್ಕಾರದಲ್ಲಿ ಅಂತಃಕಲಹ. ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆತ್ಮರಕ್ಷಣೆ ಜತೆಗೆ ದೊಡ್ಡ ಆಪತ್ತು ಎದುರಾಗಬಹುದು. ಅವರ ಪಕ್ಷದಲ್ಲಿ ಕೂಡ ಒಡಕಾಗಬಹುದು. ರಾಹುಕೇತು ಪ್ರಭಾವದಿಂದ ಮೋದಿ ಪ್ರಭಾವ ಚದುರಿಸುವ ಕೆಲಸ ಸಕ್ರಿಯವಾಗಲಿದೆ.
ರಾಷ್ಟ್ರದಲ್ಲಿ ಮಹಿಳಾ ಕೇಂದ್ರಿತ ನಾಯಕತ್ವಕ್ಕೆ ಅವಕಾಶ ಒದಗಿಬರಲಿದೆ. ಒಬ್ಬ ಮಹಿಳೆ ಮುಂದಿನ ದೃಷ್ಟಿಕೋನದ ಕುರಿತು ಹೇಳುತ್ತಾ ಪ್ರಜಾ ಹೆಗ್ಗಳಿಕೆಗೆ ಪಾತ್ರವಾಗುತ್ತಾಳೆ. ಮೇ 13ಕ್ಕೆ ಮೇಷ ಸಂಕ್ರಮಣ ಆಗುತ್ತದೆ. ಅಂದು ಚಿತ್ತಾ ನಕ್ಷತ್ರದಲ್ಲಿ ಶುಕ್ರ ವಕ್ರತ್ಯಾಗ ಮಾಡುತ್ತಾನೆ. ಇದು ಸಂಭವಿಸುವುದರಿಂದ ಮಹಿಳಾ ನೇತೃತ್ವ ತಡೆಯಲು ಸಾಧ್ಯವಿಲ್ಲ.
ಜ. 27ರ ಸುಮಾರಿಗೆ ತಾಪಮಾನ ಏರುತ್ತದೆ. ಕಟಕ ರಾಶಿಗೆ ಸೂರ್ಯ ಬರುವವರೆಗೂ (ಜೂ. 14) ಉಷ್ಣತೆ ಹೆಚ್ಚಾಗಿ, ಜೀವಹಾನಿ ಆಗಬಹುದು. ಉತ್ತರ ಭಾರತದಲ್ಲಿ ಎಡೆಬಿಡದೇ ಚಳಿ ಹೆಚ್ಚಾಗಿ ಹೋಳಿ ಹುಣ್ಣಿಮೆವರೆಗೂ ಗಂಭೀರವಾಗುತ್ತದೆ. ಚಳಿಗೆ ಸಾವುನೋವು ಆಗಬಹುದು. ಮಾ.14 ರಂಗಪಂಚಮಿ ಮುಗಿಯುವವರೆಗೂ ಉತ್ತರ ಭಾರತ ಚಳಿಯಲ್ಲಿ ನಡುಗಿ ಹೋಗುತ್ತದೆ. ಸಾಂಕ್ರಾಂಮಿಕ ರೋಗ ಉಲ್ಬಣವಾಗಬಹುದು. ಸ್ವಲ್ಪಮಟ್ಟಿಗೆ ಕೇರಳ, ಕರ್ನಾಟಕ, ತಮಿಳುನಾಡನ್ನು ಬಾಧಿಸುತ್ತದೆ. ಕಣ್ಣು, ಚರ್ಮಕ್ಕೆ ಸಂಬಂಧಿಸಿದ ರೋಗ, ಶೀತಬಾಧೆ, ಶ್ವಾಸನಾಳಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳಬಹುದು.
ಒಂದು ರಾಷ್ಟ್ರ- ಒಂದು ಚುನಾವಣೆಯಿಂದ ಆರ್ಥಿಕವಾಗಿ, ಆಡಳಿತಾತ್ಮಕವಾಗಿ ಅನುಕೂಲಗಳಿವೆ. ಆದರೆ ಈ ವಿಚಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯಬೇಕು. ಒಮ್ಮತ ಮೂಡುವುದು ಕಷ್ಟ, ವಿರೋಧದ ದನಿ ಗಟ್ಟಿಯಾಗುತ್ತದೆ. ಪಂಜಾಬ್, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ಭಾಗದಲ್ಲಿ ಭೂ ಕುಸಿತ ಆಗಬಹುದು. ದೇಶದಲ್ಲಿ ವಿಮಾನ ದುರಂತ, ರೈಲು ದುರಂತ ಸಂಭವಿಸಬಹುದು. ಇಡೀ ಭಾರತದಲ್ಲಿ ಮುಂಬೈ, ಬೆಂಗಳೂರು, ದೆಹಲಿಗೆ ಹೆಚ್ಚು ಬೇಹುಗಾರಿಕೆ ಅಗತ್ಯ. ದೇಶದುದ್ದಗಲಕ್ಕೂ ಮಳೆ ಬೆಳೆ ಚೆನ್ನಾಗಿ ಆಗುತ್ತದೆ. ಕೆಲವೆಡೆ ಬೆಳೆ ನಷ್ಟವಾದರೂ ಒಟ್ಟಾರೆ ಆಹಾರೋತ್ಪಾದನೆ ಚೆನ್ನಾಗಿರುತ್ತದೆ. ನ್ಯಾಯಾಂಗ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ಕಾಣಿಸುತ್ತದೆ.
ಅಮೆರಿಕದಲ್ಲಿ ಚುನಾವಣೆ ಮುಗಿದಿದ್ದು 2025ರ ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಾರೆ. ಅಮೆರಿಕಾ-ಭಾರತ ಸ್ನೇಹ ಹುಸಿಯಾಗಲಿದೆ. ಗ್ರಹಗಳ ಬದಲಾವಣೆಯಿಂದಾಗಿ ಭಾರತೀಯರಿಗೆ ಸಮಸ್ಯೆ ಮಾಡುವ ತೀರ್ಮಾನಗಳನ್ನು ಟ್ರಂಪ್ ಕೈಗೊಳ್ಳುತ್ತಾರೆ. ಅಮೆರಿಕ ಆರ್ಥಿಕವಾಗಿ ಸೋತಿದ್ದು, ಟ್ರಂಪ್ಗೆ ಸವಾಲಿದೆ. ಅವರು ಸವಾಲು ಸ್ವೀಕರಿಸಿದಾಗ ಭಾರತೀಯರ ಮೇಲೆ ಕೆಟ್ಟ ಪರಿಣಾಮ, ಹೊರೆ ಆಗುತ್ತದೆ. ಮೋದಿಗೂ ಕಷ್ಟವಾಗುತ್ತದೆ. ಮೋದಿ ಜನಾನುರಾಗ ತಗ್ಗುತ್ತದೆ. ಪರಿಸ್ಥಿತಿಯನ್ನು ನಾಜೂಕಾಗಿ ಬಗೆಹರಿಸಬೇಕಾಗುತ್ತದೆ.
ಪಾಕಿಸ್ತಾನದಲ್ಲಿ ರಾಜಕೀಯ ಸ್ಥಿರತೆ ಇಲ್ಲದೆ ಜನ ಉಪವಾಸ ಬೀಳುವ ಜತೆಗೆ ಜಲಪ್ರಳಯ ಎದುರಿಸಬೇಕಾಗುತ್ತದೆ. ಆ ರಾಷ್ಟ್ರವು ಭಾರತವನ್ನು ಅವಲಂಬಿಸುವ ದಿನಗಳು ದೂರವಿಲ್ಲ. ಮೋದಿಗೆ ದೊಡ್ಡ ಸವಾಲಿದೆ. ಬಾಂಗ್ಲಾದಿಂದ ನಿರಾಶ್ರಿತರು ಭಾರತಕ್ಕೆ ಬರುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಸ್ಥಿರ ರಾಜಕಾರಣದಿಂದ ಪ್ರಜಾಂದೋಲನ ಆಗಲಿದೆ. ಬಾಂಗ್ಲಾ ದೇಶವನ್ನು ಕಾಪಾಡಲು ಭಾರತದಿಂದ ಮಾತ್ರ ಸಾಧ್ಯ.
ಬಾಂಗ್ಲಾ, ಶ್ರೀಲಂಕಾ, ಪಾಕಿಸ್ತಾನದಲ್ಲಿ ಬೇರೆ ರಾಷ್ಟ್ರಗಳಿಗೆ ನೆಲೆ ಕೊಟ್ಟರೆ ಯುದ್ಧ ಭೀತಿ ಸೃಷ್ಟಿಯಾಗಲಿದೆ.
ಇಡೀ ಜಗತ್ತಿಗೆ ಜಲಕಂಟಕ ಎದುರಾಗಿ ಹತ್ತಾರು ದೇಶಗಳಲ್ಲಿ ಸಮಸ್ಯೆಯಾಗಲಿದೆ. ರಷ್ಯಾದಲ್ಲಿ ಅಸ್ಥಿರತೆ ಕಾಡಲು ಆರಂಭವಾಗುತ್ತದೆ. ರಾಹು- ಕೇತು ಬದಲಾವಣೆಯಲ್ಲಿ ಸ್ವಲ್ಪ ಯಾಮಾರಿದರೂ ಯುದ್ಧ ಭೀತಿ ಖಚಿತ. ರಷ್ಯಾ- ಅಮೆರಿಕಾ ಬಾಂಧವ್ಯ ಇನ್ನು ಮುಂದೆ ಚೆನ್ನಾಗಿರುವುದಿಲ್ಲ.
ಕುಳಿತವರನ್ನು ಸುಮ್ಮನೆ ಕುಳಿತುಕೊಳ್ಳಲು ಶನಿ ಬಿಡುವುದಿಲ್ಲ. ನಿಂತು ಕಾಯುತ್ತಿರುವವರನ್ನು ತಂದು ಕೂರಿಸುತ್ತಾನೆ. ಯಾರ್ಯಾರು ಆಸೆ ಇಟ್ಟುಕೊಂಡಿದ್ದಾರೋ, ಯಾರ್ಯಾರು ಏಕನಾಥ್ ಶಿಂಧೆ ರೀತಿ ಆಗಬಯಸಿದ್ದಾರೋ ಅವರಿಗೆ ಇದು ಅನ್ವಯಿಸುತ್ತದೆ. ಶನಿ ಪ್ರಭಾವ ಪರಿಣಾಮ- ಹರಿಚಿತ್ತ ಸತ್ಯ. ನಾಡಿನಲ್ಲಿ ವಿಪರೀತ ಮಳೆ, ವಿಪರೀತ ಬಿಸಿಲು ನಿಶ್ಚಿತ. ಕರಾವಳಿ, ಉತ್ತರ ಕನ್ನಡ, ಹಳೇ ಮುಂಬೈ ಭಾಗದಲ್ಲಿ ಹವಾಮಾನ ವೈಪರೀತ್ಯ ಉಂಟಾಗುತ್ತದೆ. ಬೆಳೆ ನಷ್ಟವಾಗುತ್ತದೆ, ಜನ ಸಂಕಷ್ಟಕ್ಕೆ ಸಿಲುಕುತ್ತಾರೆ. ಭೂಕುಸಿತವೂ ಆಗಬಹುದು. ಕಲಾವಿದರಿಗೆ ಒಳಿತಾಗಲಿದೆ. ಸಿನಿಮಾ ರಂಗ ಚೇತರಿಸಿಕೊಳ್ಳಲಿದೆ. ಅಧಿಕಾರದಲ್ಲಿರುವವರು ಅಪಮೃತ್ಯುವಿಗೆ ತುತ್ತಾಗಲಿದ್ದಾರೆ.
ಸಂಚಾರ ಮಾಡದ ಸನ್ಯಾಸಿ, ಮನೆಯ ಸೇರದ ಸಂಸಾರಿ, ದೇಶಪ್ರೇಮವಿಲ್ಲದ ಜನ ಮತ್ತು ಜನಪ್ರತಿನಿಧಿಗಳು ಧರ್ಮಭ್ರಷ್ಟರು ಎಂಬ ಮಾತಿದೆ. ಜನರ ಸೇವೆ ಮಾಡುವುದಾಗಿ ಅಧಿಕಾರ ಹಿಡಿದವರು ಈ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅಧಿಕಾರದ ಆಸೆ ಹೊಂದಿದವರು ಮೌನವಾಗಿದ್ದು ಸಾಧಿಸಬೇಕು. ಜನರ ಮನಸ್ಸು ಗೆಲ್ಲಬೇಕು. ಅಧಿಕಾರದಲ್ಲಿರುವವರು ಮೌನ, ಮುಗ್ಧತೆ ಮತ್ತು ಕಡೆಗಣಿಸುವ ಸೂತ್ರವನ್ನು ಅಳವಡಿಸಿಕೊಂಡಾಗ ದೇಶಕ್ಕೆ ಉತ್ತಮವಾದುದನ್ನು ಕೊಡಲು ಸಾಧ್ಯವಿದೆ.
ಯಾ ದೇವೀ ಮಧುಕೈಟಭಪ್ರಶಮನೀ ಯಾ ಮಾಹಿಷೋನ್ಮೂಲಿನೀ ಯಾ ಧೂಮ್ರೇಕ್ಷಣಚಂಡಮುಂಡದಮನೀ ಯಾ ರಕ್ತಬೀಜಾಶಿನೀಯಾ ಶುಂಭಾದಿನಿಶುಂಭದೈತ್ಯಶಮನೀ ಯಾ ಸಿದ್ಧಲಕ್ಷ್ಮೀಃ ಪರಾಸಾ ಚಂಡೀ ನವಕೋಟಿಶಕ್ತಿಸಹಿತಾ ಮಾಂ ಪಾತು ವಿಶ್ವೇಶ್ವರೀ॥
--------------------
2025ರಲ್ಲಿ ಮುಖ್ಯ ಹಬ್ಬ, ವ್ರತಾದಿಗಳು
ಜ. 15- ಉತ್ತರಾಯಣ ಪುಣ್ಯಕಾಲ ಸಂಕ್ರಾಂತಿ
ಜ. 27- ಮಧ್ವ ನವಮಿ
ಫೆ. 15- ಮಹಾಶಿವರಾತ್ರಿ
ಮಾ. 2- ಹೋಳಿ ಹಬ್ಬ
ಏ. 6- ಶ್ರೀರಾಮ ನವಮಿ
ಏ. 10- ಮಹಾವೀರ ಜಯಂತಿ
ಏ. 30- ಚಾಂದ್ರಮಾನ ಯುಗಾದಿ
ಮೇ 2- ಶ್ರೀ ಶಂಕರ ಜಯಂತಿ, ಶ್ರೀ ರಾಮಾನುಜ ಜಯಂತಿ
ಮೇ 7- ಶ್ರೀ ವಾಸವಾಂಬ, ಶ್ರೀ ನಿಮಿಷಾಂಬ ಜಯಂತಿ
ಮೇ 11- ನೃಸಿಂಹ ಜಯಂತಿ
ಮೇ 12- ಬುದ್ಧ ಪೂರ್ಣಿಮಾ
ಜು. 10- ಗುರು ಪೂರ್ಣಿಮಾ
ಜು. 16- ದಕ್ಷಿಣಾಯನ ಪುಣ್ಯಕಾಲ
ಜು. 24- ಜ್ಯೋತಿರ್ಭೀಮೇಶ್ವರ ವ್ರತ
ಜು. 29- ನಾಗರ ಪಂಚಮಿ
ಜು. 30- ಶಿರಿಯಾಳ ಷಷ್ಠೀ
ಆ. 8- ಶ್ರೀ ವರಮಹಾಲಕ್ಷ್ಮೀ ವ್ರತ
ಆ. 9- ಋಗ್ ಯಜುರ್ ಉಪಾಕರ್ಮ
ಆ. 10- ಗಾಯತ್ರೀ ಪ್ರತಿಪತ್
ಆ. 11- ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ
ಆ. 16- ಶ್ರೀಕೃಷ್ಣ ಜನ್ಮಾಷ್ಟಮಿ
ಆ. 26- ಸ್ವರ್ಣಗೌರಿ ವ್ರತ, ಸಾಮಗ ಉಪಾಕರ್ಮ
ಆ. 27- ವರಸಿದ್ಧಿ ವಿನಾಯಕ ವ್ರತ
ಸೆ. 6- ಅನಂತ ಪದ್ಮನಾಭ ವ್ರತ
ಸೆ. 8- ಮಹಾಲಯ ಪಕ್ಷಾರಂಭ
ಸೆ. 21- ಮಹಾಲಯ ಅಮಾವಾಸ್ಯೆ
ಸೆ. 22- ಶರನ್ನವರಾತ್ರಿ ಆರಂಭ
ಸೆ. 29- ಸರಸ್ವತ್ಯಾವಾಹನಂ
ಸೆ. 30- ದುರ್ಗಾಷ್ಟಮಿ
ಅ. 1- ಮಹಾನವಮಿ
ಅ. 2- ವಿಜಯದಶಮಿ
ಅ. 20- ನರಕ ಚತುರ್ದಶಿ
ಅ. 22- ದೀಪಾವಳಿ ಹಬ್ಬ
ನ. 26- ಸ್ಕಂದ ಷಷ್ಠಿ