

ವಿಜಯಪುರ: ಅಕ್ರಮ ಕಂಟ್ರಿ ಪಿಸ್ತೂಲ್ ಮತ್ತು ಜೀವಂತ ಗುಂಡುಗಳನ್ನು ಹೊಂದಿದ್ದ ಇಬ್ಬರು ಆರೋಪಿಗಳಿದ್ದ ಸ್ಥಳದ ಮೇಲೆ ದಾಳಿ ಮಾಡಲಾಗಿದ್ದು, 77 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಇಂಡಿಯ ಬರಗುಡಿ ನಿವಾಸಿಯಾಗಿರುವ ಸುಧೀರ್ ಕಾಮಣ್ಣ (25) ಮತ್ತು ಬಬಲೇಶ್ವರ ಉಪ್ಪಲದಿನ್ನು ನಿವಾಸಿ ಹನಮಂತ ಹಳ್ಳಿ (40) ಅಕ್ರಮ ಕಂಟ್ರಿ ಪಿಸ್ತೂಲು ಮತ್ತು ಗುಂಡುಗಳನ್ನು ಹೊಂದಿರುವ ಮಾಹಿತಿಯ ಮೇರೆಗೆ ಇಂದು ವಿಜಯಪುರದ ಸಿಇಎನ್ ಅಪರಾಧ ವಿಶೇಷ ಪೊಲೀಸ್ ಹಾಗೂ ಡಿಸಿಐಬಿ ಘಟಕ ದಾಳಿ ನಡೆಸಿದೆ. ವಿಜಯಪುರದ ಎಸ್ಪಿ ಅನುಪಮ್ ಅಗರ್ವಾಲ್ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಗಿದೆ. ದಾಳಿಯಲ್ಲಿ 3 ಕಂಟ್ರಿ ಪಿಸ್ತೂಲು, 2 ಜೀವಂತ ಗುಂಡು, 2 ಕಬ್ಬಿಣದ ಕಂಟ್ರಿ ಆಯುಧ, 10 ಡಿಬಿಬಿಎಲ್ ಜೀವಂತ ಗುಂಡುಗಳು ಸೇರಿದಂತೆ 3 ಮಚ್ಚು ಮತ್ತು 1 ಚಾಕುವನ್ನು ವಶ ಪಡಿಸಿಕೊಳ್ಳಲಾಗಿದೆ.
ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಜಯಪುರದ ವಿಶೇಷ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.