

ಮೈಸೂರು: ಪಲ್ಸರ್ ಬೈಕ್ ಹಾಗೂ ಮಹೀಂದ್ರ ಥಾರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ KSRP ಪೊಲೀಸ್ ಪೇದೆಗಳಿಬ್ಬರು ಅಸುನೀಗಿರುವ ಘಟನೆ ಮೈಸೂರು ಜಿಲ್ಲೆ ಸಿದ್ಧಾರ್ಥ್ನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕುಂಬಾರಕೊಪ್ಪಲು ಬಡಾವಣೆ ಪಿ.ಮಹೇಶ್(23), ಬಿಜಾಪುರ ಜಿಲ್ಲೆ ಜಮಖಂಡಿ ತಾಲೂಕಿನ ಅಮರನಾಥ ತಾಳಿಕೋಟಿ (24) ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ. ರಾಜ್ಯ ಮೀಸಲು ಪಡೆಯ 5ನೇ ಬೆಟಾಲಿಯನ್ನಲ್ಲಿ ಈ ಇಬ್ಬರು ಪೇದೆಗಳಾಗಿ ಕಾರ್ಯನಿರ್ವಹಿಸುತ್ತಿದ್ದರು.
ಪೇದೆಗಳಿಬ್ಬರು ಊಟ ಮಾಡಲೆಂದು ಲಲಿತ್ ಮಹಲ್ ರಸ್ತೆಯಲ್ಲಿರುವ ಫುಡ್ ಸ್ಟ್ರೀಟ್ಗೆ ಬಂದಿದ್ದರು. ಊಟದ ಬಳಿಕ KSRP ಬೆಟಾಲಿಯನ್ ಕಡೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಮಹೀಂದ್ರಾ ಥಾರ್ ಡಿಕ್ಕಿ ಹೊಡೆದ ಪರಿಣಾಮ ಪೇದೆಗಳಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದ ಬಳಿಕ ಚಾಲಕ ಪರಾರಿಯಾಗಲು ಯತ್ನಿಸಿದ್ದು, ಆತನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿದ್ಧಾರ್ಥನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ಮರನೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.