

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ (Fire Accident) ಇಬ್ಬರು ಕಾರ್ಮಿಕರು ಸಜೀವ ದಹನವಾಗಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ಸೀಗೇಹಳ್ಳಿ ಗೇಟ್ ಬಳಿ ನಡೆದಿದೆ. ಮೃತರನ್ನು ಉತ್ತರಪ್ರದೇಶ ಹಾಗೂ ಬಿಹಾರ ಮೂಲದ ಉದಯ್ ಭಾನು (40) ಮತ್ತು ರೋಷನ್ (23) ಎಂದು ಗುರುತಿಸಲಾಗಿದೆ.
ಸತೀಶ್ ಎಂಬುವವರಿಗೆ ಸೇರಿದ ಕಟ್ಟಡದಲ್ಲಿ ದುರಂತ (Fire Accident) ಸಂಭವಿಸಿದ್ದು, ಕಟ್ಟಡದಲ್ಲಿ ವುಡ್ ವರ್ಕ್ಸ್ ಮಾಡಲಾಗುತ್ತಿತ್ತು. ಸಿಲೆಂಡರ್ ಸೋರಿಕೆಯಾದ ಪರಿಣಾಮ ದುರಂತ ಸಂಭವಿಸಿದೆ ಎಂದು ಹೇಳಲಾಗಿದ್ದು, ಸಂಪೂರ್ಣ ಕಟ್ಟಡವೇ ಸುಟ್ಟು ಕರಕಲಾಗಿದೆ.
ಬೆಂಕಿ ಹತ್ತಿಕೊಂಡ ಕಟ್ಟಡದೊಳಗೆ ಇಬ್ಬರು ಕಾರ್ಮಿಕರು ಸಿಲುಕಿರುವ ಶಂಕೆಯನ್ನು ಮಾಲೀಕರು ಹಾಗೂ ಸ್ಥಳೀಯರು ವ್ಯಕ್ತಪಡಿಸಿದ್ದರು. ಜೊತೆಗೆ, ಕಟ್ಟಡಕ್ಕೆ ಬೆಂಕಿ ಬಿದ್ದಾಕ್ಷಣ ಸಂಪೂರ್ಣವಾಗಿ ಮಹಡಿ ಮೇಲೇರಿದ ಕಾರ್ಮಿಕನೊಬ್ಬ ನೀರಿನ ಟ್ಯಾಂಕ್‌ನ ಬಳಿ ಕುಳಿತುಕೊಂಡಿದ್ದಾನೆ. ಕಟ್ಟಡಕ್ಕೆ ಬೆಂಕಿ ವ್ಯಾಪಿಸಿಕೊಂಡಾಗ ಆತನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇದಾದ ನಂತರ ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸಲಾಗಿದೆ. ಇದಾದ ನಂತರ ಸ್ಥಳೀಯರ ಮಾಹಿತಿ ಮೇರೆಗೆ ಒಳಗೆ ಹೋದ ಅಗ್ನಿಶಾಮಕ ದಳದ ಸಿಬ್ಬಂದಿಗೆ ಇಬ್ಬರು ಕಾರ್ಮಿಕರು ಸಜೀವ ದಹನವಾಗಿ ಬಿದ್ದಿರುವುದು ಕಂಡುಬಂದಿದೆ.
ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಓರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.