

ಬೆಂಗಳೂರು: ಆಶಿಕಾ ರಂಗನಾಥ್ಗೆ ನಾಳೆ ಶುಕ್ರವಾರ (ನ. 25) ಬಹಳ ಮುಖ್ಯವಾದ ದಿನ. ಏಕೆಂದರೆ, ನಾಳೆ ಆಶಿಕಾ ಅಭಿನಯದ ಒಂದಲ್ಲ, ಎರಡು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಒಂದೇನೋ ಇಶಾನ್ ಅಭಿನಯದ 'ರೆಮೋ', ಇನ್ನೊಂದು ಯಾವುದು ಎಂಬ ಪ್ರಶ್ನೆ ಬರಬಹುದು. ಅದೇ ತಮಿಳಿನ 'ಪಟ್ಟತ್ತು ಅರಸನ್'.
ಹೌದು, ಕಳೆದ ವರ್ಷವೇ ಆಶಿಕಾ, ತಮಿಳಿನ ಚಿತ್ರವೊಂದರಲ್ಲಿ ನಟಿಸುವ ಸುದ್ದಿಯಾಗಿತ್ತು. ತಮಿಳಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಅಥರ್ವಗೆ ನಾಯಕಿಯಾಗಿ ಆಶಿಕಾ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 'ಬಂಗಾರದ ಮನುಷ್ಯ', 'ಬೂತಯ್ಯನ ಮಗ ಅಯ್ಯು' ಮುಂತಾದ ಕ್ಲಾಸಿಕ್ ಚಿತ್ರಗಳನ್ನು ನಿರ್ದೇಶಿಸಿರುವ ಸಿದ್ಧಲಿಂಗಯ್ಯ ಅವರ ಮೊಮ್ಮಗನಾದ ಅಥರ್ವ, ಈಗ ತಮಿಳು ಚಿತ್ರರಂಗದಲ್ಲಿ ಜನಪ್ರಿಯ ನಟ. ಈ ಚಿತ್ರದಲ್ಲಿ ಅಥರ್ವ ಕಬಡ್ಡಿ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದು, ಆಶಿಕಾ ಸಹ ಇಲ್ಲಿ ಕಬಡ್ಡಿ ಆಟಗಾರ್ತಿಯಾಗಿ ನಟಿಸಿದ್ದಾರೆ ಎಂಬ ಸುದ್ದಿ ಇದೆ.
ಈ ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಮುಕ್ತಾಯವಾಗಿದ್ದು, ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎ. ಶರ್ಕುಣಂ ನಿರ್ದೇಶಿಸಿರುವ ಈ ಚಿತ್ರದಲ್ಲಿ ಅಥರ್ವ ಮತ್ತು ಆಶಿಕಾ ಅಲ್ಲದೆ, ರಾಜ್ಕಿರಣ್, ರಾಧಿಕಾ ಶರತ್ ಕುಮಾರ್, ರವಿ ಕಾಳೆ ಮುಂತಾದವರು ನಟಿಸಿದ್ದಾರೆ.
ಇನ್ನು, 'ರೆಮೋ' ಚಿತ್ರದಲ್ಲಿ ಆಶಿಕಾ, ಮೋಹನ ಎಂಬ ಸೆಲೆಬ್ರಿಟಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡುಗಾರ್ತಿಯಾದ ಆಕೆ, ನಾಯಕನ ಗೆಳತನದಿಂದ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾಳೆ. ಆ ನಂತರ ಆಕೆಯ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬುದು ಚಿತ್ರದ ಕಥೆ.
ಒಟ್ಟಾರೆ, ಆಶಿಕಾ ಅಭಿನಯದ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುವುದಕ್ಕೆ ಪೈಪೋಟಿ ನಡೆಸಿವೆ. ಈ ಎರಡೂ ಚಿತ್ರಗಳ ಬಗ್ಗೆಯೂ ಆಶಿಕಾ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ತಮ್ಮ ವೃತ್ತಿಬದುಕಿಗೆ ಇನ್ನೊಂದು ಬ್ರೇಕ್ ನೀಡುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. ಈ ಎರಡು ಚಿತ್ರಗಳಲ್ಲಿ ಯಾವ ಚಿತ್ರ ಅವರ ಕೈಹಿಡಿಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.