ಸರಣಿ ಅನಿಲ ದುರಂತಕ್ಕೆ ಸಾಕ್ಷಿಯಾಗುತ್ತಿದೆ ವಿಶಾಖಪಟ್ಟಣ; ಮತ್ತಿಬ್ಬರ ಸಾವು, ಒಬ್ಬ ಗಂಭೀರ

gas-leak
Published on

ವಿಶಾಖಪಟ್ಟಣ: ಕಳೆದೆರಡು ತಿಂಗಳಲ್ಲಿ ಮೂರು ಅನಿಲ ದುರಂತಗಳಿಗೆ ಸಾಕ್ಷಿಯಾಗಿದೆ ವಿಶಾಖಪಟ್ಟಣ. ಮೂರು ಪ್ರಕರಣಗಳಲ್ಲಿ ಒಟ್ಟು 13 ಜನರು ಮೃತಪಟ್ಟಂತಾಗಿದೆ.

ಮೂರನೇ ಅನಿಲ ದುರಂತದಲ್ಲಿ ಇಬ್ಬರು ಮೃತಪಟ್ಟು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಪರಿಸ್ಥಿತಿ ಬಗ್ಗೆ ವರದಿ ಕೇಳಿರುವ ಸಿಎಂ ಜಗನ್​ಮೋಹನ್​ ರೆಡ್ಡಿ, ಕಾರ್ಖಾನೆಯನ್ನು ಮುಚ್ಚಲು ಆದೇಶಿಸುವಂತೆ ಜಿಲ್ಲಾಧಿಕಾರಿ ವಿನಯ್​ಚಂದ್​ಗೆ ಸೂಚಿಸಿದ್ದಾರೆ.

ಇಲ್ಲಿನ ಫರ್ವಾಡಾದ ಫಾರ್ಮಾ ಸಿಟಿಯಲ್ಲಿರುವ ಸೈನಾರ್​ ಲೈಫ್​ ಸೈನ್ಸ್​ಸ್​ನ ಔಷಧ ತಯಾರಿಕಾ ಕಾರ್ಖಾನೆಯಲ್ಲಿ ಮಂಗಳವಾರ ಬೆಳಗ್ಗೆ ಬೆಂಜಿನಿಡ್ಯಾಜೋಲ್​ ಅನಿಲ ಸೋರಿಕೆಯಾಗಿತ್ತು. ಈ ವೇಳೆ 30- 35 ಜನರು ಅಲ್ಲಿ ಕೆಲಸ ಮಾಡುತ್ತಿದ್ದರು. ದುರಂತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಅಸ್ವಸ್ಥಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರಲ್ಲಿ ಒಬ್ಬ ಜೀವನ್ಮರಣ ಸ್ಥಿತಿಯಲ್ಲಿದ್ದಾನೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಆರ್​.ಕೆ. ಮೀನಾ ತಿಳಿಸಿದ್ದಾರೆ.

ಸದ್ಯ ರಾಸಾಯನಿಕ ಅನಿಲ ಕಾರ್ಖಾನೆಯಿಂದ ಹೊರಗೆ ವ್ಯಾಪಿಸಿರಲಿಲ್ಲ. ಹೀಗಾಗಿ ಹೆಚ್ಚಿನ ಅನಾಹುತ ಸಂಭವಿಸುವುದು ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಕಳೆದರಡು ತಿಂಗಳಲ್ಲಿ ಆಂಧ್ರಪ್ರದೇಶದಲ್ಲಿ ಸಂಭವಿಸಿದ ಮೂರನೇ ಅನಿಲ ದುರಂತವಾಗಿದೆ. ಎರಡು ದಿನಗಳ ಹಿಂದಷ್ಟೇ ಕರ್ನೂಲ್​ ಜಿಲ್ಲೆ ನಂದ್ಯಾಲದ ಸ್ಪೈ ಆಗ್ರೋ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾಗಿ ಮ್ಯಾನೇಜರ್​ ಮೃತಪಟ್ಟಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net