

ಲಖನೌ: ಕಿವಿಗೆ ಹಿಯರ್‌ಫೋನ್ ತಗುಲಿಸಿಕೊಂಡು ರೈಲು ಹಳಿ ಮೇಲೆ ಕುಳಿತು ಮೊಬೈಲ್ನಿಂದ ಹಾಡುಗಳನ್ನು ಕೇಳುತ್ತಿದ್ದ ಇಬ್ಬರು ಬಾಲಕರು ವೇಗವಾಗಿ ಬಂದ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಉತ್ತರ ಪ್ರದೇಶದ ಗಾಜಿಪುರದಲ್ಲಿ ದುರ್ಘಟನೆ ನಡೆದಿದೆ. ಗಾಜಿಪುರದ ಸಮೀರ್ (15) ಮತ್ತು ಜಾಕಿರ್ ಅಹಮದ್ (16) ಮೃತರು.
ಈ ಇಬ್ಬರು ಬಾಲಕರು ಭಾನುವಾರ ಸಂಜೆ ಮೊಬೈಲ್ ಜೊತೆಗೆ ಕಿವೆಗೆ ಹಿಯರ್‌ಫೋನ್ ಹಾಕಿಕೊಂಡು ತಮ್ಮಿಷ್ಟದ ಹಾಡುಗಳನ್ನು ಕೇಳುತ್ತ ರೈಲ್ವೆ ಹಳಿ ಮೇಲೆ ಕುಳಿತಿದ್ದರು. ಅದೇ ವೇಳೆ ಹಳಿ ಮೇಲೆ ಬಂದ ರೈಲು ಡಿಕ್ಕಿ ಹೊಡೆದಿದೆ. ಆಗ ಇಬ್ಬರೂ ಬಾಲಕರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹಳಿಯಲ್ಲಿ ಮೃತದೇಹಗಳನ್ನು ಕಂಡ ಸಿಬ್ಬಂದಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಹಿಯರ್ ಫೋನ್ ಕಿವಿಗೆ ಹಾಕಿಕೊಂಡಿದ್ದರಿಂದ ರೈಲಿನ ಸದ್ದು ಕೇಳಿಸದೇ ದುರ್ಘಟನೆ ಸಂಭವಿಸಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.