

ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದುಹೋಗುತ್ತಿದ್ದ ವಿದ್ಯಾರ್ಥಿನಿಯರನ್ನು ಕಾರಿನಲ್ಲಿ ಹಿಂಬಾಲಿಸಿ ಮೊಬೈಲ್ ನಂಬರ್ ನೀಡುವಂತೆ ಒತ್ತಾಯಿಸಿದ ಇಬ್ಬರನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉದ್ಯಾವರ ನಿವಾಸಿ ಜಮಾಲುದ್ದೀನ್ ಫೈಸಲ್ ಹಾಗೂ ಹೊಸಬೆಟ್ಟು ನಿವಾಸಿ ರಾಫಿಲ್ ಬಂಧಿತರು. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ಕಾರಿನಲ್ಲಿ ಹಿಂಬಾಲಿಸಿದ ತಂಡ, ದಾರಿ ಮಧ್ಯೆ ತಡೆದು, ಮೊಬೈಲ್ ನಂಬರ್ ನೀಡುವಂತೆ ಒತ್ತಾಯಿಸಿದ್ದಾರೆ. ವಿದ್ಯಾರ್ಥಿನಿಯರು ಧೃತಿಗೆಡದೆ, ಅಲ್ಲಿಂದ ಓಡಿ ಪರಾರಿಯಾಗಿದ್ದು, ನಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಸಂಚಾರಕ್ಕೆ ಬಳಸಿದ್ದ ಕಾರನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ.