ಮೈಸೂರು, ಬೆಂಗಳೂರು, ಶಿವಮೊಗ್ಗ ಕಂಬಳಕ್ಕೆ ಗ್ರೀನ್‌ಸಿಗ್ನಲ್

kambala
ಕಾಡಿನತಾರು ಸೂರ್ಯ ಕಂಬಳೋತ್ಸವ
Published on

ಮೂಡುಬಿದಿರೆ: ಮೈಸೂರು, ಬೆಂಗಳೂರು ಹಾಗೂ ಶಿವಮೊಗ್ಗದಲ್ಲಿ ಕಂಬಳ ನಡೆಸಲು ಹೈಕೋರ್ಟ್‌ನಿಂದ ಗ್ರೀನ್‌ಸಿಗ್ನಲ್ ಲಭಿಸಿದೆ. ಪಿಲಿಕುಳ ಕಂಬಳ ನಡೆಸುವ ಕುರಿತು ವಿಚಾರಣೆ ಮುಂದೂಡಲಾಗಿದೆ. ಈ ಮೂಲಕ ಸರ್ಕಾರ ಅಧೀನದ ರಾಜ್ಯ ಕಂಬಳ ಅಸೋಸಿಯೇಷನ್‌ಗೆ ಮೊದಲ ಜಯ ಸಿಕ್ಕಂತಾಗಿದೆ.

ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಬೆಳಪು ಡಾ.ದೇವಿಪ್ರಸಾದ್ ಶೆಟ್ಟಿ, ಇದು ನಮ್ಮ ಹೋರಾಟಕ್ಕೆ ಸಂದ ಜಯ. ಸಾಗಾಟ ವೇಳೆ ಕೋಣಗಳಿಗೆ ಹಿಂಸೆಯಾಗುತ್ತದೆ ಎಂದು ಪೇಟಾ ಪರ ವಕೀಲರು ವಾದಿಸಿದ್ದರು. ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ವಿನೋದ್ ಕುಮಾರ್ ಮಧೂರು, ಧನಂಜಯ್ ಕುಮಾರ್ ದೊಡ್ಡಗುತ್ತು ಕಂಬಳದ ಪರ ವಾದ ಮಂಡಿಸಿದ್ದರು. ಪ್ರವಾಸೋದ್ಯಮಕ್ಕೆ ಇದು ಉತ್ತೇಜನ ನೀಡುತ್ತದೆ. ಸರ್ಕಾರ ಕೂಡ ಇದಕ್ಕೆ ಮಾನ್ಯತೆ ನೀಡಿದೆ ಎಂದು ಕೋರ್ಟ್ ನಮ್ಮ ಬೇಡಿಕೆಯನ್ನು ಪುರಸ್ಕರಿಸಿದೆ ಎಂದು ಮಾಹಿತಿ ನೀಡಿದರು.

ಕಂಬಳ ಅಸೋಸಿಯೇಷನ್ ಕೋಶಾಧಿಕಾರಿ ಮುಚ್ಚೂರು ಲೋಕೇಶ್ ಶೆಟ್ಟಿ ಮಾಹಿತಿ ನೀಡಿ, ಇದೊಂದು ಐತಿಹಾಸಿಕ ದಿನ. ಕಂಬಳ ಅಸೋಸಿಯೇಷನ್‌ಗೆ ಸಂದ ಜಯ ಎಂದು ತಿಳಿಸಿದ್ದಾರೆ.

ಇಂದು ಅಧಿಕಾರ ಸ್ವೀಕಾರ

ರಾಜ್ಯ ಸರ್ಕಾರ ಕ್ರೀಡಾ ಪ್ರಾಧಿಕಾರದಡಿ ನೂತನ ಕಂಬಳ ಅಸೋಸಿಯೇಷನ್ ರಚಿಸಿ ಆದೇಶಿಸಿದ್ದು, ಇದರ ಚೊಚ್ಚಲ ಸಭೆ ಅ.15ರಂದು ಮಧ್ಯಾಹ್ನ 3.30ಕ್ಕೆ ಮೂಡುಬಿದಿರೆ ಕಡಲಕೆರೆಯ ಸೃಷ್ಟಿ ಗಾರ್ಡನ್‌ನಲ್ಲಿ ಅಸೋಸಿಯೇಷನ್ ಅಧ್ಯಕ್ಷ ಬೆಳಪು ಡಾ.ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ನೂತನವಾಗಿ ನೇಮಕವಾದ ಸಮಿತಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿರುವರು. ಮುಂದಿನ ಕಂಬಳ ಸೀಸನ್ ಬಗ್ಗೆ ಅಸೋಸಿಯೇಷನ್ ಕಚೇರಿ ಹಾಗೂ ಅಧಿಕಾರ ಸ್ವೀಕಾರ ಕಾರ್ಯಕ್ರಮ ಬಗ್ಗೆ, ಸರ್ಕಾರದ ಅನುದಾನದ ವಿಚಾರ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಮುಕ್ತ ಚರ್ಚೆ ನಡೆಯಲಿದೆ ಎಂದು ಅಸೋಸಿಯೇಷನ್ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net