

Bengaluru Road rage case : ರಾಜ್ಯ ರಾಜಧಾನಿ ಬೆಂಗಳೂರು ಕೋಟ್ಯಂತರ ಮಂದಿಗೆ ಜೀವನ ಕಟ್ಟಿಕೊಟ್ಟಿರುವ ಜೀವನಾಡಿ. ಕೇವಲ ಕನ್ನಡಿಗರಿಗೆ ಮಾತ್ರವಲ್ಲ ಹೊರ ರಾಜ್ಯದವರನ್ನು ಕೈಬಿಸಿ ಕರೆದು, ತನ್ನ ಮಡಿಲಲ್ಲಿ ಜಾಗ ನೀಡುತ್ತದೆ ನಮ್ಮ ಬೆಂಗಳೂರು. ಇಲ್ಲಿನ ಜನರು ಕೂಡ ಹೊರಗಿನವರನ್ನು ಪ್ರೀತಿಯಿಂದ ಸ್ವಾಗತಿಸುತ್ತಾರೆ ಮತ್ತು ಗೌರವಿಸುತ್ತಾರೆ. ಹೊರಗಿನಿಂದ ಬಂದವರಲ್ಲಿ ನಮ್ಮ ಜನ ನಿರೀಕ್ಷೆ ಮಾಡುವುದೇನೆಂದರೆ ನಮ್ಮ ಭಾಷೆಯ ಮೇಲಿನ ಗೌರವವಷ್ಟೇ. ಆದರೆ, ಕೆಲ ಮಂದಿ ಇಲ್ಲಿಯೇ ಇದ್ದು, ಎಲ್ಲವನ್ನು ಅನುಭವಿಸಿ ಕೊನೆಗೆ ನಮ್ಮ ವಿರುದ್ಧವೇ ತಿರುಗಿ ಬೀಳುತ್ತಿದ್ದಾರೆ. ಒಂದೆರೆಡಲ್ಲ ಇಂತಹ ಸಾಕಷ್ಟು ಘಟನೆಗಳು ಮರುಕಳಿಸುತ್ತಲೇ ಇದೆ. ಇದಕ್ಕೆಲ್ಲ ಕೊನೆ ಯಾವಾಗ ಅನ್ನೋ ಪ್ರಶ್ನೆ ಕೂಡ ಮೂಡುತ್ತದೆ.
ಇದೀಗ ಅಂಥದ್ದೇ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಶೀಲಾದಿತ್ಯ ಬೋಸ್ ಮತ್ತು ಅವರ ಪತ್ನಿ ಸ್ಕ್ವಾಡ್ರನ್ ಲೀಡರ್ ಮಧುಮಿತಾ, ಬೆಂಗಳೂರಿನಲ್ಲಿ ತಮ್ಮ ಮೇಲೆ ಕೆಲವರು ದಾಳಿ ಮಾಡಿದ್ದಾರೆ ಎಂದು ನಿನ್ನೆ ಆರೋಪ ಮಾಡಿದ್ದರು. ಆರಂಭದಲ್ಲಿ ಬೋಸ್ ಮೇಲೆಯೇ ದಾಳಿ ಮಾಡುತ್ತಿರುವಂತೆ ಕಾಣುವ ಸಿಸಿಟಿವಿ ದೃಶ್ಯಾವಳಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು. ಹೀಗಾಗಿ, ಬೈಕ್ ಸವಾರ್ ವಿಕಾಸ್ ಎಂಬುವರನ್ನು ಪೊಲೀಸರು ಬಂಧಿಸಿದ್ದರು. ಆದರೆ, ತನಿಖೆಯಲ್ಲಿ ಇಡೀ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಶಿಲಾದಿತ್ಯ ಬೋಸ್ ತಮ್ಮ ಪತ್ನಿಯೊಂದಿಗೆ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿತ್ತು. ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಬೈಕ್‌ನಲ್ಲಿ ಬಂದ ಕೆಲವರು ನಮ್ಮನ್ನು ಅಡ್ಡಗಟ್ಟಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಅವರ ಪತ್ನಿ ಸ್ಕ್ವಾಡ್ರನ್ ಲೀಡರ್ ಮಧುಮಿತಾ ಕೂಡ ವಿಡಿಯೋ ಮಾಡಿ, ಪೊಲೀಸರಿಗೆ ಈ ವಿಷಯವನ್ನು ವರದಿ ಮಾಡಿದ ನಂತರವೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು. ವಿಡಿಯೋದಲ್ಲಿ, ಬೋಸ್ ಅವರ ಮುಖ ಮತ್ತು ಕುತ್ತಿಗೆಯಲ್ಲಿ ರಕ್ತವಿರುವುದು ಕಂಡುಬಂದಿತು. ಅವರ ಪತ್ನಿ ಅವರ ಪಕ್ಕದಲ್ಲಿ ಕಾರನ್ನು ಚಲಾಯಿಸುತ್ತಿರುವ ದೃಶ್ಯವು ಸಹ ವಿಡಿಯೋದಲ್ಲಿತ್ತು.
ಕ್ರಮೇಣ ಈ ವಿಷಯವು 'ಕನ್ನಡಿಗ vs ಕನ್ನಡಿಗೇತರ' ಎಂಬಂತೆ ಬದಲಾಯಿತು. ಆದಾಗ್ಯೂ, ವಿಡಿಯೋವನ್ನು ಆಧರಿಸಿ ತನಿಖೆ ನಡೆಸಿದ ಬೆಂಗಳೂರು ಪೂರ್ವ ವಲಯ ಡಿಸಿಪಿ ದೇವರಾಜ್, ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಆರಂಭದಲ್ಲಿ ಬೋಸ್ ಹೇಳಿದ್ದೇನೆಂದರೆ, ತನ್ನ ಮೇಲೆ ದಾಳಿ ನಡೆದಿದೆ ಎಂದು. ಆದರೆ, ಅಲ್ಲಿ ನಡೆದಿದ್ದು ಮಾತ್ರ ಅದಕ್ಕೆ ವಿರುದ್ಧವಾಗಿದೆ. ಈ ವಿಂಗ್ ಕಮಾಂಡರ್, ಬೈಕ್ ಸವಾರ ವಿಕಾಸ್ ಮೇಲೆ ಬಾಕ್ಸರ್ನಂತೆ ಹಿಗ್ಗಾಮುಗ್ಗಾ ದಾಳಿ ಮಾಡಿದ್ದಾನೆ.
ವಿಡಿಯೋದಲ್ಲಿ ನಾವು ಸಿವಿ ರಾಮನ್ ನಗರ ಹಂತ 1ರಲ್ಲಿ ಇರುವ ಡಿಆರ್‌ಡಿಒನಲ್ಲಿ ವಾಸಿಸುತ್ತಿದ್ದೇವೆ. ಇಂದು (ಏಪ್ರಿಲ್ 21) ಬೆಳಿಗ್ಗೆ, ನನ್ನ ಹೆಂಡತಿ ನನ್ನನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ಯುತ್ತಿದ್ದಾಗ ಹಿಂದಿನಿಂದ ಬಂದ ಬೈಕ್, ನಮ್ಮ ಕಾರನ್ನು ಅಡ್ಡಗಟ್ಟಿತ್ತು. ನಾನಿಲ್ಲಿ ನಿಮ್ಮೊಂದಿಗೆ ನನ್ನ ಕಾರಿನ ಡ್ಯಾಶ್ ಕ್ಯಾಮ್ ವಿಡಿಯೋವನ್ನು ಸಹ ಹಂಚಿಕೊಳ್ಳುತ್ತೇನೆ. ಸವಾರರಲ್ಲಿ ಒಬ್ಬ ಕನ್ನಡದಲ್ಲಿ ನನ್ನನ್ನು ನಿಂದಿಸಲು ಆರಂಭಿಸಿದ. ಅಲ್ಲದೆ, ಕಾರಿನ ಮೇಲೆ ಡಿಆರ್‌ಡಿಒ ಸ್ಟಿಕ್ಕರ್ ಅನ್ನು ಗಮನಿಸಿ, ಇನ್ನಷ್ಟು ನಿಂದನೆಗಳು ಮುಂದುವರಿಸಿದ. ಅಲ್ಲದೆ, ನನ್ನ ಹೆಂಡತಿಯನ್ನು ಸಹ ನಿಂದಿಸಿದನು. ನನಗೆ ಅದನ್ನು ಸಹಿಸಲಾಗಲಿಲ್ಲ. ಹಾಗಾಗಿ ನಾನು ಕಾರಿನಿಂದ ಇಳಿದಾಗ, ಒಬ್ಬ ವ್ಯಕ್ತಿ ನನ್ನ ಮುಖದ ಮೇಲೆ ಕೀಲಿಯಿಂದ ಹೊಡೆದನು. ನನ್ನ ಮುಖದ ತುಂಬ ರಕ್ತ ಹರಿಯಿತು. ನಿಮ್ಮನ್ನು ರಕ್ಷಿಸುವವರನ್ನು ನೀವು ಹೀಗೆ ನಡೆಸಿಕೊಳ್ಳುತ್ತೀರಾ? ಎಂದು ಕೇಳಿದೆ. ಆದರೆ, ಆಶ್ಚರ್ಯಕರವಾಗಿ, ಇನ್ನೂ ಅನೇಕ ಜನರು ಬಂದು ನಮ್ಮನ್ನು ನಿಂದಿಸಲು ಪ್ರಾರಂಭಿಸಿದರು. ಒಬ್ಬ ವ್ಯಕ್ತಿ ಕಲ್ಲು ತೆಗೆದುಕೊಂಡು ಕಾರಿನ ಕಿಟಕಿಗಳು ಮತ್ತು ನನ್ನ ತಲೆಯನ್ನು ಒಡೆಯಲು ಪ್ರಯತ್ನಿಸಿದನು. ಈ ವೇಳೆ ನನ್ನ ಹೆಂಡತಿ ತಕ್ಷಣ ನನ್ನನ್ನು ಪೊಲೀಸ್ ಠಾಣೆಗೆ ಕರೆದೊಯ್ದಳು. ನಾನು ದೂರು ನೀಡಲು ಹೋದಾಗ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಕರ್ನಾಟಕದಲ್ಲಿ ಇಂತಹ ಸನ್ನಿವೇಶಗಳು ಆಶ್ಚರ್ಯಕರವಾಗಿವೆ ಎಂದು ದಂಪತಿ ವಿಡಿಯೋದಲ್ಲಿ ಆರೋಪಿಸಿದ್ದಾರೆ.
ಈ ಪ್ರಕರಣ ಬಳಿಕ ಬೈಕ್ ಸವಾರ ಹಾಗೂ ಟೆಕ್ಕಿ ವಿಕಾಸ್ ಕುಮಾರ್ ಕೂಡ ಶೀಲಾದಿತ್ಯ ಬೋಸ್ ವಿರುದ್ಧ ದೂರು ನೀಡಿದರು. ಅದರ ಪ್ರಕಾರ ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ವಿಕಾಶ್ ಮೇಲೆ ಶಿಲಾದಿತ್ಯ ಬೋಸ್ ಮನಬಂದಂತೆ ಹಲ್ಲೆ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗಾಗಿ, ಬೋಸ್ ವಿರುದ್ಧವೇ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿದ್ದು, ವಿಕಾಶ್ರನ್ನು ಬಿಡುಗಡೆ ಮಾಡಿದ್ದಾರೆ. ಆದರೆ, ಎಫ್ಐಆರ್ನಲ್ಲಿ ನೇರವಾಗಿ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಹೆಸರು ಉಲ್ಲೇಖಿಸದೇ ಇರುವುದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಕಾಸ್ ಕುಮಾರ್ ಅವರು ನೀಡಿರುವ ದೂರಿನ ಪ್ರಕಾರ, ಏಪ್ರಿಲ್ 21 ರಂದು ಬೆಳಗ್ಗೆ 6.20ರ ಸುಮಾರಿಗೆ ಸ್ನೇಹಿತನ ಬೈಕ್ ವಾಪಸ್ಸು ನೀಡಲು ವಿಕಾಶ್ ಅವರ ಮನೆಗೆ ಹೋಗುವಾಗ ಅದೇ ಸಮಯದಲ್ಲಿ ಮಾರುತಿ ಸುಜುಕಿ ಎರ್ಟಿಗಾ ಕಾರ್ನಲ್ಲಿ ಬಂದ ಬೋಸ್, ಬೈಕ್ಗೆ ವಾಹನ ಟಚ್ ಮಾಡಿದ್ದಾರೆ. ಇದಾದ ಬಳಿಕ ವಿಕಾಸ್ ಅವರ ಬೈಕ್ಗೆ ಕಾರನ್ನು ಅಡ್ಡ ಹಾಕಿ, ಕಾರಿಗೆ ಏಕೆ ಟಚ್ ಮಾಡಿದೆ ಎಂದು ಪ್ರಶ್ನಿಸಿದ್ದಾರೆ. ಬಳಿಕ ವಿಕಾಸ್, ನಾನಲ್ಲ, ನನ್ನ ಬೈಕ್ಗೆ ನೀವೇ ಟಚ್ ಮಾಡಿದ್ರಿ ಎಂದಿದ್ದಾರೆ. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಕಾರಿನಲ್ಲಿ ಕುಳಿತಿದ್ದ ಬೋಸ್, ಕೆಳಗೆ ಇಳಿದು ಬಂದು ವಿಕಾಸ್ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ, ನಾನು ಏರ್ಪೋರ್ಸ್ನಲ್ಲಿ ಇರುವವರು. ನನ್ನ ಜೊತೆ ಆಟ ಆಡಬೇಡ ಎಂದು ಬೆದರಿಕೆ ಹಾಕಿದ್ದಾರೆ. ಇದೇ ವೇಳೆ ವಿಕಾಸ್, ತನ್ನ ಸ್ನೇಹಿತನಿಗೆ ಕರೆ ಮಾಡಲು ಪೋನ್ ತೆಗೆದುಕೊಂಡಾಗ ಬೋಸ್ ಆತನ ಕೈಯನ್ನು ಕಚ್ಚಿ ಮೊಬೈಲ್ ಕಿತ್ತುಕೊಂಡು ಬಿಸಾಕಿ ಒಡೆದು ಹಾಕಿದ್ದಲ್ಲದೆ, ಬೈಕ್ ಕೀ ಅನ್ನು ಕಿತ್ತುಕೊಂಡು ಬಿಸಾಡಿದ್ದಾರೆ. ಅಷ್ಟೇ ಅಲ್ಲದೆ, ಹಿಂಬದಿಯಿಂದ ಕುತ್ತಿಗೆಯನ್ನು ಹಿಡಿದುಕೊಂಡು ಕತ್ತನ್ನು ಹಿಸುಕಿ, ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ವಿಕಾಸ್ ನೀಡಿರುವ ದೂರಿನ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ವಿಂಗ್ ಕಮಾಂಡರ್ ಬೋಸ್, ಯುವಕನ ಮೇಲೆ ಹಲ್ಲೆ ವಿಚಾರವಾಗಿ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ. ವಿಂಗ್ ಕಮಾಂಡರ್ ಆಗಲಿ ಯಾರೇ ಆಗಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಘಟನೆ ಸಂಬಂಧ ಬೈಯಪ್ಪನಹಳ್ಳಿ ಠಾಣೆಯಲ್ಲಿ ಇಬ್ಬರ ವಿರುದ್ಧವೂ ಪ್ರಕರಣಗಳು ದಾಖಲಿಸಲಾಗಿದೆ. ಪೊಲೀಸರು ಎರಡೂ ಪ್ರಕರಣಗಳನ್ನು ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ವಿಧಾನಗಳ ಆಧಾರದ ಮೇಲೆ ನಾವು ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಒಂದು ತೀರ್ಮಾನಕ್ಕೆ ಬರುತ್ತೇವೆ. ಸೂಕ್ತ ತನಿಖೆಯ ನಂತರವೇ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಬಿ.ದಯಾನಂದ್ ಪ್ರತಿಕ್ರಿಯಿಸಿದ್ದಾರೆ.
ಸದ್ಯ ತನಿಖೆ ನಡೆಯುತ್ತಿದ್ದು, ಎಫ್ಐಆರ್ ದಾಖಲಾಗುತ್ತಿದ್ದಂತೆ ವಿಂಗ್ ಕಮಾಂಡರ್ ಶೀಲಾದಿತ್ಯ ಬೋಸ್ ಪರಾರಿಯಾಗಿದ್ದಾರೆ. ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದು ಗೊತ್ತಾಗುತ್ತಿದ್ದಂತೆ ಪತ್ನಿ ಜೊತೆ ವಿಂಗ್ ಕಮಾಂಡರ್ ಆದಿತ್ಯ ಬೋಸ್ ಕೊಲ್ಕತ್ತಾಗೆ ಎಸ್ಕೇಪ್ ಆಗಿದ್ದಾನೆ ಅಂತ ಹೇಳಲಾಗ್ತಿದೆ.