

ಬೆಂಗಳೂರು: ಒಬ್ಬರಿಗೆ ಚಿವುಟಿದರೆ ಇನ್ನೊಬ್ಬರಿಗೆ ನೋವಾಗುತ್ತದೆ, ಒಬ್ಬರಿಗೆ ದುಃಖವಾದರೆ ಇನ್ನೊಬ್ಬರಿಗೆ ಅಳು ಬರುತ್ತದೆ, ಒಬ್ಬರಿಗೆ ಸಿಟ್ಟುಬಂದರೆ ಇನ್ನೊಬ್ಬರು ರೊಚ್ಚಿಗೇಳುತ್ತಾರೆ ... ಸಾಮಾನ್ಯವಾಗಿ ಅವಳಿ-ಜವಳಿ ಎಂದರೆ ಸಿನಿಮಾದಲ್ಲಿ ಈ ತರಹ ತೋರಿಸಲಾಗುತ್ತದೆ. ಆದರೆ, ನಿಜಜೀವನದಲ್ಲಿ ಅವಳಿಗಳಿಗೆ ಇದೇ ತರಹದ ಅನುಭವಗಳಾಗುತ್ತವಾ? ಈ ಪ್ರಶ್ನೆ ಸಹಜವಾಗಿಯೇ ಎಲ್ಲರಲ್ಲೂ ಇರುತ್ತದೆ. ಈ ಪ್ರಶ್ನೆಯನ್ನು ಕನ್ನಡ ಚಿತ್ರರಂಗದ ಜನಪ್ರಿಯ ಅವಳಿ ಸಹೋದರಿಯರಾದ ಅದ್ವಿತಿ ಮತ್ತು ಅಶ್ವಿತಿ ಅವರ ಮುಂದಿಟ್ಟರೆ, ಅವರಿಂದ ಏನು ಉತ್ತರ ಬರುತ್ತದೆ ಗೊತ್ತಾ?
‘ಇಬ್ಬರ ವಿಚಾರ ಸೇಮ್ ಇಬ್ಬರ ಗುಣ ಸೇಮ್ ನೂರಕ್ಕೆ ಶೇ 80ರಷ್ಟು ನಮ್ಮಿಬ್ಬರ ಯೋಚನೆ ಒಂದೇ ಆಗಿರುತ್ತದೆ. ಅಷ್ಟೇ ಅಲ್ಲ ಒಮ್ಮೊಮ್ಮೆ ಒಂದೇ ಪದವನ್ನು ಏಕಕಾಲದಲ್ಲಿ ಥಟ್ ಅಂತ ಹೇಳಿದ್ದೂ ಇದೆ. ಅದನ್ನು ಕೇಳಿ ಸ್ನೇಹಿತರು ಅಚ್ಚರಿ ಪಟ್ಟಿದ್ದೂ ಇದೆ. ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳಲ್ಲ. ಏನೇ ಇದ್ದರೂ ನೇರವಾಗಿ ಹೇಳಿಬಿಡುತ್ತೇವೆ’ ಹೀಗೆ ಇಬ್ಬರ ನಡುವಿನ ಸಾಮ್ಯತೆಗಳ ಪಟ್ಟಿ ಬಿಚ್ಚುತ್ತಾರೆ ಅದ್ವಿತಿ.
ಹೀಗಿರುವಾಗ ಇದೇ ಅವಳಿ ಸಹೋದರಿಯರಿಗೆ ಮದುವೆ ವಿಚಾರವಂತೂ ಸಾಕಷ್ಟು ರೊಚ್ಚಿಗೆಬ್ಬಿಸಿದೆಯಂತೆ. ಹೋದಲ್ಲೆಲ್ಲ ನೀವು ಟ್ವಿನ್ಗಳನ್ನೇ ಮದುವೆ ಆಗ್ತೀರಾ? ಎಂಬ ಪ್ರಶ್ನೆ ಕೇಳಿ ಕೇಳಿ ಅದ್ವಿತಿ ಮತ್ತು ಅಶ್ವಿತಿಗೆ ಸಾಕಾಗಿದೆಯಂತೆ. ‘ಆ ಥರ ಏನೂ ಇಲ್ಲ. ಇಬ್ಬರೂ ಬೇರೆ ಬೇರೆಯವರನ್ನೇ ಮದುವೆಯಾಗುತ್ತೇವೆ. ಈಗಲೇ ಆ ಬಗ್ಗೆ ಯೋಚಿಸಿಲ್ಲ. ಟ್ವಿನ್ ಅನ್ನುವುದೇ ಒಂದೊಳ್ಳೆ ಫೀಲಿಂಗ್. ಎಲ್ಲೇ ಹೋದರೂ ಜನ ನಮ್ಮನ್ನೇ ನೋಡುತ್ತಾರೆ. ಮೊದ ಮೊದಲಿಗೆ ಅದು ಇರಿಟೇಟ್ ಆಗುತ್ತಿತ್ತು. ಇದೀಗ ಆ ಕಾರಣದಿಂದಲೇ ಜನ ನಮ್ಮನ್ನು ಗುರುತಿಸುತ್ತಿದ್ದಾರೆ’ ಎಂಬುದು ಅದ್ವಿತಿ ಮಾತು.
ಅಪ್ಪಂಗೇ ಕನ್ಫ್ಯೂಸ್ ... ಅಮ್ಮಂಗಿಲ್ಲ ...: ಸಹಜವಾಗಿ ಅವಳಿ-ಜವಳಿಗಳೆಂದರೆ ಅಪ್ಪ-ಅಮ್ಮಂಗೆ ಅವಳ್ಯಾರು, ಇವಳ್ಯಾರು ಎಂಬ ಗೊಂದಲ. ಆ ಗೊಂದಲ ಅದ್ವಿತಿ, ಅಶ್ವಿತಿ ಮನೆಯಲ್ಲೂ ಆಗುತ್ತಲೇ ಇರುತ್ತದೆಯಂತೆ. ‘ಒಮ್ಮೊಮ್ಮೆ ಅಪ್ಪ ನನ್ನನ್ನೇ ಅಶ್ವಿತಿ ಎಂದು ತಿಳಿದು ಏನೆನೋ ಹೇಳುತ್ತಾರೆ. ನಾನು ಅವಳ ಬಳಿ ಹೋಗಿ ಅಪ್ಪ ಹಿಂಗೆಲ್ಲಾ ಹೇಳ್ತಿದ್ರು ನೋಡು ಎಂದು ಅವಳ ಗಮನಕ್ಕೂ ತರುತ್ತಿದ್ದೆ. ಆದರೆ, ಅಮ್ಮ ಯಾವತ್ತೂ ನಮ್ಮಿಬ್ಬರಲ್ಲಿ ಯಾರು ಅದ್ವಿತಿ, ಅಶ್ವಿತಿ ಎಂಬುದನ್ನು ಥಟ್ ಅಂತ ಹೇಳುತ್ತಾರೆ. ಎಷ್ಟೇ ಆದ್ರೂ ಅಮ್ಮ ಅಲ್ವಾ!’ ಎಂದು ಖುಷಿಯಿಂದ ಹೇಳುತ್ತಾರೆ ಅದ್ವಿತಿ.
ಕಾಲೇಜು ನೆನಪು ಶಾಶ್ವತ...
ಕಾಲೇಜ್ ಎಂದರೆ ಸಾವಿರ ನೆನಪುಗಳ ರಾಶಿಯೇ ಇರುತ್ತದೆ. ಅಂಥದ್ದರಲ್ಲಿ ಟ್ವಿನ್ಸ್ಗಳಿದ್ದರೆ, ಆ ನೆನಪುಗಳು ಡಬಲ್ ಆಗುತ್ತವೆ. ಅದು ಅದ್ವಿತಿ ಮತ್ತು ಅಶ್ವಿತಿ ಜೀವನದಲ್ಲೂ ಘಟಿಸಿದೆಯಂತೆ. ಅದ್ವಿತಿ ಎಂದು ಅಶ್ವಿತಿಗೆ ಬೈದದ್ದು, ಅಶ್ವಿತಿ ಎಂದು ಅದ್ವಿತಿಗೆ ಬೈದಿದ್ದೂ ಇದೆ. ‘ಬಿಕಾಂ ಓದುತ್ತಿದ್ದಾಗ, ನನ್ನದು ‘ಡಿ’ ಸೆಕ್ಷನ್. ಅಶ್ವಿತಿ ‘ಬಿ’ ಬ್ಯಾಚ್. ನಮ್ಮ ಲೆಕ್ಚರರ್ ಪಾಠ ಮಾಡುತ್ತಿದ್ದಂತೆ ನಾನು ಮಲಗಿ ಬಿಡುತ್ತಿದ್ದೆ. ಕ್ಲಾಸ್ ಬಿಟ್ಟಮೇಲೆ ನಾನೇ ಅಂದುಕೊಂಡು, ಲೆಕ್ಚರರ್ ಅಶ್ವಿತಿಗೆ ಬೈಯ್ದಿದ್ದೇ ಹೆಚ್ಚು. ಬಳಿಕ ನಾವಿಬ್ಬರು ಟ್ವಿನ್ಸ್ ಎಂಬುದು ಗಮನಕ್ಕೆ ಬಂದ ಮೇಲೆ, ನನಗೆ ಆಫೀಸ್ಗೆ ಕರೆಸಿ ವಾರ್ನ್ ಮಾಡುತ್ತಿದ್ದರು. ಒಟ್ಟಿನಲ್ಲಿ ಕಾಲೇಜು ಇಬ್ಬರಿಗೂ ಮರೆಯಲಾರದ ನೆನಪುಗಳನ್ನು ನೀಡಿದೆ’ ಎನ್ನುತ್ತಾರೆ. ಇಬ್ಬರ ಮಾರ್ಕ್ಸ್
ಸೇಮ್ ಟು ಸೇಮ್
ಅದ್ವಿತಿ ಮತ್ತು ಅಶ್ವಿತಿ ಶಾಲೆ ಮತ್ತು ಕಾಲೇಜು ದಿನಗಳಲ್ಲಿ ಬಹುಪಾಲು ಸಮ ಅಂಕಗಳನ್ನೇ ತೆಗೆದುಕೊಂಡಿದ್ದಾರೆ. ಆ ಸಂದರ್ಭ ನೆನಪಿಸಿಕೊಂಡರೆ ಈಗಲೂ ಇಬ್ಬರಿಗೂ ಅಚ್ಚರಿ ಆಗುತ್ತದೆಯಂತೆ. ‘ಚಿಕ್ಕಂದಿನಿಂದಲೂ ಇಬ್ಬರೂ ಓದುವುದರಲ್ಲಿ ಮುಂದು. ಒಂದು ವರ್ಷ ನಾನು ಫಸ್ಟ್ ಬಂದರೆ, ಮಾರನೇ ವರ್ಷ ಅವಳು ಫಸ್ಟ್. ಒಮ್ಮೊಮ್ಮೆ ಇಬ್ಬರ ಅಂಕಗಳೂ ಸೇಮ್ ಬಂದು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದೂ ಉಂಟು. ಎಂಬಿಎವರೆಗೂ ಇದು ಮುಂದುವರಿದಿತ್ತು. ಸ್ವತಃ ಲೆಕ್ಚರರ್ಗಳೇ ಚೀಟಿಂಗ್ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದುಂಟು. ಕ್ರೀಡೆಯಲ್ಲಿ ಇಬ್ಬರೂ ಪಾಲ್ಗೊಳ್ಳುತ್ತಿದ್ದೆವು. ಅದರಲ್ಲೂ ರನ್ನಿಂಗ್ ಇಷ್ಟ. ಇಬ್ಬರನ್ನೂ ಕಳುಹಿಸಲು ಬರುವುದಿಲ್ಲ ಎಂಬ ಕಾರಣಕ್ಕೆ ನಮ್ಮಿಬ್ಬರಲ್ಲೇ ಸ್ಪರ್ಧೆ ಏರ್ಪಡಿಸುತ್ತಿದ್ದರು. ಪ್ರತಿ ಸಲ ಅವಳು ಮೊದಲ ಸ್ಥಾನ ಪಡೆದರೆ, ನಾನು 3ನೇ ಸ್ಥಾನದಲ್ಲಿರುತ್ತಿದ್ದೆ’ ಎಂದು ಕಾಲೇಜು ದಿನಗಳನ್ನು ಮೆಲುಕು ಹಾಕುತ್ತಾರೆ.
ನಾವಿಬ್ಬರೂ ಒಂದು ರೀತಿ ಕನ್ನಡಿ ಇದ್ದಂತೆ. ಇಬ್ಬರದ್ದೂ ಒಂದೇ ಗುಣ. ಅವಳಿಗೆ ಗೊತ್ತಿರುವುದು ನನಗೆ ಗೊತ್ತು. ನನಗೆ ಗೊತ್ತಿರುವ ವಿಚಾರ ಆಕೆಗೂ ಗೊತ್ತು. ದೇಹ ಎರಡಾದರೂ ಇಬ್ಬರ ಮನಸ್ಸು ಒಂದೇ. | ಅದ್ವಿತಿ ಶೆಟ್ಟಿ.