

ಮುಂಬೈ: ಲಾಕ್ಡೌನ್ 4.0ದ ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರ ಹಲವು ನಿರ್ಬಂಧಗಳನ್ನು ತೆರವುಗೊಳಿಸಿದ್ದು, ಬಹುತೇಕ ನಿರ್ಧಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ.
ಕೇಂದ್ರದಿಂದ ಮಾರ್ಗಸೂಚಿ ಹೊರಬೀಳುತ್ತಿದ್ದಂತೆ ರಾಜ್ಯ ಸರ್ಕಾರಗಳೂ ಕೂಡ ತಮ್ಮಲ್ಲಿನ ಪರಿಸ್ಥಿತಿಗೆ ಅನ್ವಯ ಆಗುವಂತೆ ಲಾಕ್ಡೌನ್ ಸಡಿಲಿಕೆ ಮಾಡಿಕೊಳ್ಳುವ ಜತೆ ಕೊವಿಡ್-19 ನಿಯಂತ್ರಣಾ ಕ್ರಮಗಳನ್ನೂ ಕೈಗೊಳ್ಳುತ್ತಿವೆ.
ಇದೀಗ ದೇಶದಲ್ಲಿ ಅತ್ಯಂತ ಹೆಚ್ಚು, ಅಂದರೆ 35,000 ಕೊವಿಡ್ ಸೋಂಕಿತರು ಇರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಆನ್ಲೈನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊವಿಡ್ ವಿಪತ್ತನ್ನು ಮುಂಗಾರು ಪ್ರವೇಶದ ಒಳಗೇ ತೊಡೆದು ಹಾಕಲು ಇಚ್ಛಿಸುತ್ತೇವೆ. ಅದಕ್ಕೆ ಪೂರಕವಾಗಿ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದಿದ್ದಾರೆ.
ರಾಜ್ಯದಲ್ಲಿ ಕರೊನಾ ಪ್ರಸರಣವನ್ನು ನಾವು ನಿಯಂತ್ರಣಕ್ಕೆ ತಂದಿದ್ದೇವೆ. ಹಾಗಾಗಿ ಇನ್ನು ಲಾಕ್ಡೌನ್ ನಿರ್ಬಂಧಗಳನ್ನು ಹಂತಹಂತವಾಗಿ ತೆರವುಗೊಳಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ನ್ ಝೋನ್ಗಳನ್ನು ಗ್ರೀನ್ ಝೋನ್ಗಳನ್ನಾಗಿಯೇ ಇಟ್ಟುಕೊಳ್ಳುವುದೇ ಒಂದು ಸವಾಲಾಗಿದೆ. ಆದರೂ ಅಲ್ಲಿ ಸ್ವಲ್ಪ ಸಡಿಲಿಕೆ ಮಾಡುವ ಬಗ್ಗೆ ಯೋಚನೆ ಮಾಡುತ್ತೇವೆ. ಈಗಾಗಲೇ 50,000ಕೈಗಾರಿಕೆಗಳ ಮರು ಪ್ರಾರಂಭಕ್ಕೆ ಷರತ್ತುಗಳೊಂದಿಗೆ ಒಪ್ಪಿಗೆ ನೀಡಿದ್ದೇವೆ. ಆದರೆ ಜಾಸ್ತಿ ಸಡಿಲಿಕೆ ಸದ್ಯಕ್ಕೆ ಸಾಧ್ಯವೇ ಇಲ್ಲ.
ನನಗೆ ಗೊತ್ತು ಲಾಕ್ಡೌನ್ ಸಡಿಲ ಮಾಡದೆ ಇದ್ದರೆ ನಾನು ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಅಮೆರಿಕ, ಯುರೋಪ್ ದೇಶಗಳಲ್ಲಿ ಲಾಕ್ಡೌನ್ ಸಡಿಲಿಕೆಯಿಂದ ಏನಾಯಿತು? ಕೊವಿಡ್ ಪ್ರಮಾಣ ಎಷ್ಟು ಹೆಚ್ಚಾಯಿತು ಎಂದು ನಾವು ನೋಡಿದ್ದೇವೆ. ಹಾಗಾಗಿ ಸದ್ಯಕ್ಕೆ ನಿರ್ಬಂಧಗಳ ಸಂಪೂರ್ಣ ತೆರವು ಸಾಧ್ಯವಿಲ್ಲ ಎಂದಿದ್ದಾರೆ. ಹಾಗೇ ವಲಸೆ ಕಾರ್ಮಿಕರು ದಯವಿಟ್ಟು ನಡೆಯುವುದನ್ನು ಬಿಡಿ ಎಂದೂ ಮನವಿ ಮಾಡಿದ್ದಾರೆ.
ಕೇಂದ್ರದಿಂದ ಲಾಕ್ಡೌನ್ ವಿಸ್ತರಣಾ ಅವಧಿ ಪ್ರಕಟಗೊಳ್ಳುವ ಮೊದಲೇ ಮಹಾರಾಷ್ಟ್ರ ಮೇ 31ರವರೆಗೆ ಲಾಕ್ಡೌನ್ ಮುಂದುವರಿಸಿ ಆದೇಶ ನೀಡಿತ್ತು. (ಏಜೆನ್ಸೀಸ್)