

ನವದೆಹಲಿ: ಇಂದು ಬಹುತೇಕ ಜಗತ್ತಿನ ಗಮನವನ್ನೇ ಸೆಳೆದಿದ್ದ ಕೆಲವೇ ಸೆಕೆಂಡುಗಳ ವಿದ್ಯಮಾನದಲ್ಲಿ ಬರೋಬ್ಬರಿ 500 ಕೋಟಿ ರೂ. ನಷ್ಟವಾಗಿದೆ. ಕಣ್ಣೆದುರೇ ಇದ್ದ ಎರಡು ಅವಳಿ ಗೋಪುರಗಳ ನೆಲಸಮದೊಂದಿಗೆ ಕೋಟಿಗಟ್ಟಲೆ ರೂಪಾಯಿ ಧೂಳೀಪಟವಾಗಿದೆ.
ಉತ್ತರಪ್ರದೇಶದ ನೋಯ್ಡಾದಲ್ಲಿ 2004ರಲ್ಲಿ ನಿರ್ಮಾಣಗೊಂಡಿದ್ದ ಬೃಹತ್ ಅವಳಿ ಗೋಪುರ ಸೂಪರ್ ಟೆಕ್ ಅಪೆಕ್ಸ್ ಮತ್ತು ಸಿಯಾನಿಯನ್ನು ಇಂದು ವಿಶೇಷ ಟೆಕ್ನಾಲಜಿ ಮೂಲಕ ನೆಲಸಮಗೊಳಿಸಲಾಗಿದೆ. ದೀರ್ಘಾವಧಿಯ ನಿರ್ಮಾಣದೊಂದಿಗೆ ಪೂರ್ಣಗೊಂಡಿದ್ದ ಈ ಕಟ್ಟಡ ಇಂದು ಮಧ್ಯಾಹ್ನ 12 ಸೆಕೆಂಡುಗಳಲ್ಲಿ ನೆಲಸಮಗೊಂಡಿದೆ. 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಕಟ್ಟಡದ ನೆಲಸಮಕ್ಕೆ 20 ಕೋಟಿ ರೂ. ವೆಚ್ಚವಾಗಿದೆ. ಆದರೆ ಇದರಿಂದಾದ ಒಟ್ಟು ನಷ್ಟ ಬರೋಬ್ಬರಿ 500 ಕೋಟಿ ರೂಪಾಯಿ!
ಈ ಬೃಹತ್ ಅವಳಿ ಗೋಪುರಗಳ ನೆಲಸಮದಿಂದ ಕಂಪನಿಗೆ ಒಟ್ಟು 500 ಕೋಟಿ ರೂ. ನಷ್ಟವಾಗಿದೆ ಎಂದು ಸೂಪರ್ಟೆಕ್ ಎಮರಾಲ್ಡ್ ಕಂಪನಿಯ ಅಧ್ಯಕ್ಷ ಆರ್.ಕೆ. ಅರೋರಾ ತಿಳಿಸಿದ್ದಾರೆ. ಈ ಸ್ಥಳದ ಜಾಗಕ್ಕೆ ನಾವು ಹಾಕಿದ್ದ ಹಣ, ನಿರ್ಮಾಣ ವೆಚ್ಚ, ವಿವಿಧ ಪ್ರಾಧಿಕಾರಗಳಿಂದ ಅನುಮತಿ ಪಡೆಯಲು ನೀಡಿದ್ದ ಮೊತ್ತ, ಬಂಡವಾಳದ ಬಾಬ್ತು ಬ್ಯಾಂಕ್ಗಳಿಗೆ ವರ್ಷಗಟ್ಟಲೆ ಕಟ್ಟಿದ್ದ ಬಡ್ಡಿ, ಅಲ್ಲದೆ ಈ ಟ್ವಿನ್ ಟವರ್ ಖರೀದಿದಾರರಿಗೆ ಮರಳಿಸಿದ ಶೇ. 12 ಬಡ್ಡಿ ಹಣ ಎಲ್ಲವೂ ಸೇರಿ ಒಟ್ಟು 500 ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನು 8 ಲಕ್ಷ ಚದರಡಿ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಈ ಎರಡು ಟ್ವಿನ್ ಟವರ್ಗಳಲ್ಲಿದ್ದ 900ಕ್ಕೂ ಅಧಿಕ ಅಪಾರ್ಟ್ಮೆಂಟ್ಗಳ ಈಗಿನ ಬೆಲೆಯೇ ಸುಮಾರು 700 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸೂಪರ್ ಟೆಕ್ ಎಮರಾಲ್ಡ್ ಸಂಸ್ಥೆ ನಿಯಮಾವಳಿ ಉಲ್ಲಂಘಿಸಿ ಈ ಬೃಹತ್ ಗೋಪುರಗಳನ್ನು ನಿರ್ಮಿಸಿದೆ ಎಂದು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಆಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಿಬಂಧನೆಗಳಿಗೆ ವಿರುದ್ಧವಾಗಿ ನಿರ್ಮಿಸಿದ್ದ ಅವಳಿ ಗೋಪುರಗಳನ್ನು ಕೆಡವಲು ಆಗಸ್ಟ್ 31, 2021ರಂದು ಆದೇಶಿಸಿತ್ತು.