ಕಿರುತೆರೆಯ ಹಿರಿಯ ನಟ ರಿತುರಾಜ್ ಸಿಂಗ್ ಇನ್ನಿಲ್ಲ

singh new
Published on

ಮುಂಬೈ: ಕಿರುತೆರೆಯ ಹಿರಿಯ ನಟ ರಿತುರಾಜ್ ಸಿಂಗ್ (59) ಮಂಗಳವಾರ ಮಧ್ಯರಾತ್ರಿ ಹೃದಯಾಘಾತದಿಂದ ನಿಧನರಾದರು. ರಿತುರಾಜ್ ಮುಂಬೈನ ಲೋಖಂಡವಾಲಾದಲ್ಲಿರುವ ತಮ್ಮ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾದರು. ನಟನ ಹಠಾತ್ ನಿಧನಕ್ಕೆ ಕಿರುತೆರೆ ಇಂಡಸ್ಟ್ರಿಯಲ್ಲಿ ಶೋಕದ ಅಲೆ ಹರಡಿದೆ. ಅಭಿಮಾನಿಗಳು ಕೂಡ ಸಾಕಷ್ಟು ಶಾಕ್ ಆಗಿದ್ದಾರೆ.

ಅನೇಕ ಟಿವಿ ಶೋಗಳಲ್ಲಿ ಕೆಲಸ ಮಾಡಿದ್ದ ರಿತುರಾಜ್ 
90 ರ ದಶಕದಲ್ಲಿ ಜೀ ಟಿವಿಯಲ್ಲಿ ರಿಯಾಲಿಟಿ ಗೇಮ್ ಶೋ 'ಟೋಲ್ ಮೋಲ್ ಕೆ ಬೋಲ್' ಮೂಲಕ ತಮ್ಮದೇ ಆದ ಐಡೆಂಟಿಟಿಯನ್ನು ಸೃಷ್ಟಿಸಿಕೊಂಡ ರಿತುರಾಜ್ ಸಿಂಗ್, ಅನೇಕ ಧಾರಾವಾಹಿಗಳು, ಚಲನಚಿತ್ರಗಳು ಮತ್ತು ಒಟಿಟಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ. 1993 ರಲ್ಲಿ ಜೀ ಟಿವಿಯಲ್ಲಿ ಪ್ರಸಾರವಾದ 'ಬನೇಗಿ ಅಪ್ನಿ ಬಾತ್' ಕಾರ್ಯಕ್ರಮವು ಸಾಕಷ್ಟು ಜನಪ್ರಿಯವಾಯಿತು. 'ಹಿಟ್ಲರ್ ದೀದಿ', 'ಜ್ಯೋತಿ', 'ಶಪತ್', 'ಅದಾಲತ್', 'ಆಹತ್', 'ದಿಯಾ ಔರ್ ಬಾತಿ', ವಾರಿಯರ್ ಹೈ', 'ಲಾಡೋ 2' ಧಾರಾವಾಹಿಗಳಲ್ಲಿಯೂ ಅವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ರಿತುರಾಜ್ ಅವರ ಸ್ನೇಹಿತ ಅಮಿತ್ ಬಹ್ಲ್ ನಟನ ಸಾವನ್ನು ಖಚಿತಪಡಿಸಿದ್ದಾರೆ. "ಅವರು ಹೃದಯ ಸ್ತಂಭನದಿಂದ ನಿಧನರಾದರು, ಮೇದೋಜ್ಜೀರಕ ಗ್ರಂಥಿಯ ಚಿಕಿತ್ಸೆಗಾಗಿ ಕೆಲವು ಸಮಯದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು, ಮನೆಗೆ ಹಿಂದಿರುಗಿದ ನಂತರ ಅವರು ಕೆಲವು ಹೃದಯ ತೊಂದರೆಗಳನ್ನು ಅನುಭವಿಸಿ ನಿಧನರಾದರು" ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ರಿತುರಾಜ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಹಲವು ಗಣ್ಯರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಟ ಅರ್ಷದ್ ವಾರ್ಸಿ ಕೂಡ " ಮಿಸ್ ಯು ಬ್ರದರ್...” ಎಂದು ಬರೆದುಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ, ರಿತುರಾಜ್ ಕಿರುತೆರೆಯ ಅತ್ಯಂತ ಜನಪ್ರಿಯ ಶೋ ಅನುಪಮಾದಲ್ಲಿ ಕಾಣಿಸಿಕೊಂಡರು. ಅವರ ಪಾತ್ರದೊಂದಿಗೆ ಸಾಕಷ್ಟು ಜನಮನ್ನಣೆ ಗಳಿಸಿದರು. ಯೇ ರಿಶ್ತಾ ಕ್ಯಾ ಕೆಹ್ಲಾತಾ ಚಿತ್ರದಲ್ಲಿ ಕೂಡ ಒಂದು ಪಾತ್ರವನ್ನು ನಿರ್ವಹಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net