

ಮುಂಬೈ: ಹಿಂದಿ ಕಿರುತೆರೆಯಲ್ಲಿ ಸಾಕಷ್ಟು ಜನಮನ್ನಣೆ ಪಡೆದಿರುವ ಕ್ರೈಂ ಪ್ಯಾಟ್ರೋಲ್ (Crime Patrol) ಧಾರಾವಾಹಿ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ್ದ ನಟ ನಿತಿನ್ ಚೌಹಾಣ್ (Nitin Chauhan) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರಿಗೆ (Nitin Chauhan) 35 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ. ನಿತಿನ್ ಅವರ ಸಾವಿನ ಸುದ್ದಿಯನ್ನು ಅವರ ಸ್ನೇಹಿತರು, ಕುಟುಂಬದವರು ಖಚಿತಪಡಿಸಿದ್ದಾರೆ.ನಿತಿನ್ ಸಾವಿನ ಸುತ್ತ ಅನುಮಾನದ ಹುತ್ತ ನಿರ್ಮಾಣವಾಗಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಗುರುವಾರ (ನವೆಂಬರ್ 07) ಮುಂಬೈನ ಅಪಾರ್ಟ್ಮೆಂಟ್ ಒಂದರಲ್ಲಿ ನಿತಿನ್ (Nitin Chauhan) ಅವರು ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಿತಿನ್ ಅವರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಅಧಿಕಾರಿಗಳು ಸಲ್ಲಿಸುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ತರ ಪ್ರದೇಶ ಆಲಿಘಡ ಮೂಲದ ನಿತಿನ್ (Nitin Chauhan), ಹಿಂದಿಯ ದಾದಾಗಿರಿ–2 ರಿಯಾಲಿಟಿ ಶೋ ವಿಜೇತರಾಗಿದ್ದರು. ಇದಲ್ಲದೇ ಅನೇಕ ರಿಯಾಲಿಟಿ ಶೋ, ಕ್ರೈಂ ಪ್ಯಾಟ್ರೋಲ್ (Crime Patrol) ಸೇರಿದಂತೆ ಹಿಂದಿ ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು.