ವರ್ಷಕ್ಕೆ 84 ಸಾವಿರ ರೂಪಾಯಿ... ಮಾಜಿ ಪತ್ನಿಯ ಬೆಕ್ಕುಗಳಿಗೂ ಜೀವನಾಂಶ ನೀಡುವಂತೆ ಕೋರ್ಟ್​ ಆದೇಶ! Alimony

Alimony
Published on

ಇಸ್ತಾಂಬುಲ್: ಸಾಮಾನ್ಯವಾಗಿ ಪತಿ-ಪತ್ನಿಯರ ವಿಚ್ಛೇದನದ ಸಮಯದಲ್ಲಿ ಮಕ್ಕಳ ಆರೈಕೆ ಮತ್ತು ಅವರ ಶಿಕ್ಷಣ ವೆಚ್ಚಕ್ಕಾಗಿ ಜೀವನಾಂಶ ( alimony ) ನೀಡುವುದು ಸಹಜ. ಆದರೆ, ಟರ್ಕಿಯ ಯುವಕನೊಬ್ಬ ತನ್ನ ಮಾಜಿ ಪತ್ನಿಯ ಸಾಕು ಬೆಕ್ಕುಗಳಿಗೆ ಜೀವನಾಂಶ ನೀಡಬೇಕಾದ ವಿಚಿತ್ರ ಸನ್ನಿವೇಶ ಎದುರಾಗಿದೆ. ಈ ಘಟನೆ ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದಿದೆ.

ಇಸ್ತಾನ್‌ಬುಲ್ ಮೂಲದ ಬುಗ್ರಾ ಮತ್ತು ಎಸ್ಗಿ ಎರಡು ವರ್ಷಗಳ ಹಿಂದೆ ವಿವಾಹವಾದರು. ಒಟ್ಟಿಗೆ ಇದ್ದ ಸಮಯದಲ್ಲಿ ದಂಪತಿ ಎರಡು ಬೆಕ್ಕುಗಳನ್ನು ಸಾಕುತ್ತಿದ್ದರು. ವಿಚ್ಛೇದನದ ನಂತರ ಬೆಕ್ಕಿನ ಪಾಲನೆಯ ಜವಾಬ್ದಾರಿಯನ್ನು ಎಸ್ಗಿ ವಹಿಸಿಕೊಂಡರು. ವಿಚ್ಛೇದನದ ಬಳಿಕ ಜೀವನಾಂಶ ಕುರಿತು ನಡೆದ ವಿಚಾರಣೆ ವೇಳೆ ನ್ಯಾಯಾಲಯವು, ಬುಗ್ರಾಗೆ ಸಾಕು ಬೆಕ್ಕುಗಳಿಗೆ ಭಾರಿ ಮೊತ್ತದ ಜೀವನಾಂಶ ಪಾವತಿಸಲು ಆದೇಶಿಸಿದೆ.

10 ವರ್ಷಗಳ ಕಾಲ ನಿಯಮಿತವಾಗಿ ಬೆಕ್ಕುಗಳ ಆರೈಕೆಗಾಗಿ ಹಣವನ್ನು ಪಾವತಿಸುವುದಾಗಿ ಬುಗ್ರಾ ಇದೇ ವೇಳೆ ನ್ಯಾಯಾಲಯಕ್ಕೆ ತಿಳಿಸಿದರು. ಅವರು ಪ್ರತಿ ಮೂರು ತಿಂಗಳಿಗೊಮ್ಮೆ 10,000 ಟರ್ಕಿಶ್ ಲಿರಾ (21,307 ಭಾರತೀಯ ರೂಪಾಯಿ) ಪಾವತಿಸಬೇಕಾಗುತ್ತದೆ. ಈ ಮೊತ್ತ ವರ್ಷಕ್ಕೆ 84 ಸಾವಿರ ರೂಪಾಯಿಗಳಾಗುತ್ತವೆ. ಈ ಹಣವು ಬೆಕ್ಕುಗಳ ಆಹಾರ, ವ್ಯಾಕ್ಸಿನೇಷನ್‌ ಮತ್ತು ವೈದ್ಯಕೀಯ ವೆಚ್ಚಗಳನ್ನು ಒಳಗೊಂಡಿರುತ್ತದೆ.

ಇನ್ನು ಬೆಕ್ಕುಗಳ ನಿರ್ವಹಣೆಯ ಜೊತೆಗೆ, ಬುಗ್ರಾ ತನ್ನ ಮಾಜಿ ಪತ್ನಿ ಎಸ್ಗಿಗೆ 5,50,000 ಟರ್ಕಿಶ್ ಲಿರಾ (11 ಲಕ್ಷ ಭಾರತೀಯ ರೂಪಾಯಿ) ಪರಿಹಾರವನ್ನು ಪಾವತಿಸಲು ನ್ಯಾಯಾಲಯ ಆದೇಶಿಸಿದೆ.

ಟರ್ಕಿಯಲ್ಲಿ ಸಾಕುಪ್ರಾಣಿಗಳನ್ನು ಮೈಕ್ರೋಚಿಪಿಂಗ್ ಮೂಲಕ ನೋಂದಾಯಿಸಬೇಕೆಂದು ಕಾನೂನು ಇದೆ. ಈ ನೋಂದಣಿಯೊಂದಿಗೆ, ಸಾಕುಪ್ರಾಣಿಯ ಮಾಲೀಕರು ಕಾನೂನಿನ ಅಡಿಯಲ್ಲಿ ಬರುತ್ತಾರೆ. ಒಂದು ವೇಳೆ ಸಾಕುಪ್ರಾಣಿಯನ್ನು ಕೈಬಿಟ್ಟರೆ, ಮಾಲೀಕರು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net