ಹರಿಹರ: ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯ ಹಿನ್ನೀರಿನಿಂದಾಗಿ ರುದ್ರಭೂಮಿ ಜಲಾವೃತವಾಗಿದ್ದು, ಶವ ಸಂಸ್ಕಾರಕ್ಕೆ ಸಂಬಂಧಿಗಳು ಪರದಾಡಿದ ಪ್ರಸಂಗ ಹೊರವಲಯದ ಗುತ್ತೂರಿನಲ್ಲಿ ಗುರುವಾರ ನಡೆಯಿತು.
ಗುತ್ತೂರು ವಾಸಿ ಮಂಜಪ್ಪ ಎಚ್.ಎಂ.ಸಿ. ಮೃತಪಟ್ಟಿದ್ದು, ಶವಸಂಸ್ಕಾರಕ್ಕೆ ತೆರಳಿದರು. ಶವ ಹೊತ್ತು ಬಂದಾಗ ರುದ್ರಭೂಮಿಯಲ್ಲಿ ಕಾಲಿಡಲು ಸಾಧ್ಯವಿರಲಿಲ್ಲ. ಕೊನೆಗೆ ಈಜು ಬಲ್ಲ ಕೆಲ ಯುವಕರು ಸೊಂಟ ಮಟ್ಟದ ನದಿ ನೀರಲ್ಲಿ ಸಾಗಿ ಎತ್ತರದ ಪ್ರದೇಶದಲ್ಲಿ ಶವಸಂಸ್ಕಾರ ಮಾಡಿದರು.
ಮಹಿಳೆಯರು ಹಾಗೂ ಈಜು ಬಾರದವರು ದೂರದ ನದಿ ತೀರದಲ್ಲೇ ನಿಂತಿದ್ದರು. ಸಂಬಂಧಿಕರಿಗೆ ತಮ್ಮ ಆತ್ಮೀಯರ ಸಾವಿನ ದುಃಖ ಒಂದೆಡೆಯಾದರೆ, ಅಂತ್ಯಸಂಸ್ಕಾರಕ್ಕಾದ ಅಡ್ಡಿಯಿಂದ ಮತ್ತಷ್ಟು ವಿಚಲಿತರಾದರು.
ಗುತ್ತೂರು ಹಾಗೂ ಸುತ್ತಲಿನ ಪ್ರದೇಶದಲ್ಲಿ ಅಕ್ರಮ ಮಣ್ಣು, ಮರಳುಗಾರಿಕೆಯ ಪರಿಣಾಮವಾಗಿ ನದಿ ದಡದ ರುದ್ರಭೂಮಿ ಗುಂಡಿಯಾಗಿ ಪರಿಣಮಿಸಿದೆ. ಹೀಗಾಗಿ, ಮಳೆಗಾಲದಲ್ಲಿ ಶವಸಂಸ್ಕಾರಕ್ಕೆ ತೊಂದರೆಯಾಗುತ್ತದೆ ಎಂದು ಕೆಲ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.