ತುಂಗಭದ್ರಾ ಜಲಾಶಯ ಗೇಟ್‌ ದುರಸ್ತಿ ಕಾರ್ಯ; ಮೂರನೇ ಎಲಿಮೆಂಟ್ ಅಳವಡಿಕೆಯೂ ಯಶಸ್ವಿ!

tb dam
Published on

ಕೊಪ್ಪಳ: ತಾಲ್ಲೂಕಿನ ಮುನಿರಾಬಾದ್​ ನಲ್ಲಿರುವ ತುಂಗಭದ್ರಾ ಜಲಾಶಯದಲ್ಲಿ ಕೊಚ್ಚಿ ಹೋಗಿರುವ 19ನೇ ಕ್ರಸ್ಟ್ ಗೇಟ್ ಸ್ಥಳದಲ್ಲಿ ಮೂರನೇ ಎಲಿಮೆಂಟ್​ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ. ಶನಿವಾರ ಮೂರು ಎಲಿಮೆಂಟ್ ಇಳಿಸಿದ್ದು, 19ನೇ ತೂಬಿನಿಂದ ನೀರು ನದಿಗೆ ಹರಿಯುವಿಕೆ ಶೇ.99ರಷ್ಟು ಬಂದ್ ಆಗಿದೆ.

ರಭಸವಾಗಿ ಹರಿಯುತ್ತಿರುವ ನೀರಿನ ನಡುವೆಯೂ ಶನಿವಾರ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಎರಡು ಬೃಹತ್ ಕ್ರೇನ್​ಗಳ ನೆರವಿನಿಂದ ಮೂರನೇ ಎಲಿಮೆಂಟ್ ಅಳವಡಿಕೆ ಮಾಡಿದರು. ಈ ಮೂಲಕ ಹರಿಯುವ ನೀರನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಶುಕ್ರವಾರ ಹರಿವ ನೀರಿಗೆ 60 ಅಡಿ ಉದ್ದ, 4 ಅಡಿ ಎತ್ತರ ಹಾಗೂ 13 ಟನ್ ತೂಕದ ಒಂದು ಎಲಿಮೆಂಟ್ ಸುಮಾರು ಎರಡು ಗಂಟೆ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಇಳಿಸಲಾಯಿತು. ಈ ಮೂಲಕ ಆರಂಭಿಕ ಯಶಸ್ಸು ಗಳಿಸಿದ ತಂಡ ಶನಿವಾರ ಕೇvl 15-20 ನಿಮಿಷಕ್ಕೆ ಒಂದರಂತೆ ಮತ್ತೆರೆಡು ಎಲಿಮೆಂಟ್ ಇಳಿಸಿತು.

ನೀರಿನ ರಭಸಕ್ಕೆ ಕಿತ್ತು ಹೋಗಿದ್ದ 19 ನೇ ಕ್ರಸ್ಟ್ ಗೇಟ್ ನದಿಯಲ್ಲಿ‌ ನೀರಿನ ಹರಿವು ಕಡಿಮೆಯಾಗಿದ್ದರಿಂದ ಕಾಣಿಸಿಕೊಂಡಿದೆ.

ಕ್ರಸ್ಟ್ ಗೇಟ್ ಬೆಡ್ ಹಂತದಿಂದ 15 ಅಡಿ ಎತ್ತರದವರೆಗೆ ಎಲಿಮೆಂಟ್ ಇಳಿಸಿದ್ದರಿಂದ ನೀರಿನ ಹರಿವು ಬಂದ್ ಆಯಿತು. ಬಳಿಕ ಬಾಕಿ 32 ಗೇಟ್ ಬಂದ್ ಮಾಡಿ ನೀರಿನ ಒತ್ತಡ ಪರೀಕ್ಷಿಸಲಾಯಿತು. ಆಗಲೂ 19 ನೇ ಗೇಟ್ ನಲ್ಲಿ ಯಾವುದೇ ವ್ಯತ್ಯಾಸ ಕಂಡುಬರಲಿಲ್ಲ.

ಈ ಮೂಲಕ ಹೊಸ ಪ್ರಯೋಗ ನಡೆಸಿ ಬಹುದೊಡ್ಡ ಯಶಸ್ಸು ಸಾಧಿಸಿದ ಕೀರ್ತಿಗೆ ಟಿಬಿ ಬೋರ್ಡ್, ರಾಜ್ಯ ಸರ್ಕಾರ ಪಾತ್ರವಾಗಿದೆ. ಡ್ಯಾಂ​​​ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ನೂರಾರು ಸಿಬ್ಬಂದಿ ಪ್ರಾಣವನ್ನೇ ಪಣಕ್ಕಿಟ್ಟು ಶ್ರಮಿಸಿದ್ದಾರೆ. ಈ ಮೂಲಕ ಹೊಸ ಇತಿಹಾಸ ಬರೆದಿದೆ. ಗೇಟ್ ಬಂದ್ ಆಗಿದ್ದರಿಂದ ನೀರು ಉಳಿಸುವ ಸಾಧ್ಯತೆ ದಟ್ಟವಾಗಿಸಿದ್ದು, ರೈತರು ನಿಟ್ಟುಸಿರು ಬಿಡುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net