

ತುಮಕೂರು: ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ ಕೇಳಿಬಂದ ಬೆನ್ನಲ್ಲೇ ತುಮಕೂರು ಜಿಲ್ಲಾ ಕಾರಾಗೃಹ ಸಹಾಯಕ ಅಧೀಕ್ಷಕಿ ಎಂ. ಶಾಂತಮ್ಮ ಅವರನ್ನು ಎತ್ತಂಗಡಿ ಮಾಡಲಾಗಿದೆ.
ತುಮಕೂರು ಜಿಲ್ಲಾ ಕಾರಾಗೃಹ ಅಧೀಕ್ಷಕರಾಗಿ ಮಲ್ಲಿಕಾರ್ಜುನ್ ಎಸ್ ಮಾಳೆ ಅವರನ್ನು ನೇಮಿಸಲಾಗಿದೆ. ಮಾಳೆ ಅವರು ಈ ಹಿಂದೆ ಬಳ್ಳಾರಿ ಕೇಂದ್ರ ಕಾರಾಗೃಹ ಸಹಾಯಕ ಅಧೀಕ್ಷಕರಾಗಿದ್ದರು.
ಭ್ರಷ್ಟಾಚಾರ ಆರೋಪ ಹೊತ್ತಿರುವ ಶಾಂತಮ್ಮ ಅವರನ್ನು ಶಿವಮೊಗ್ಗ ಮಹಿಳಾ ಕೇಂದ್ರ ಕಾರಾಗೃಹಕ್ಕೆ ಎತ್ತಗಂಡಿ ಮಾಡಲಾಗಿದೆ. ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಮಹಾ ನಿರ್ದೇಶಕ ಮನೀಷ್ ಖರ್ಬಿಕರ್ ಅವರು ಆದೇಶ ಹೊರಡಿಸಿದ್ದಾರೆ.
ತುಮಕೂರು ಜಿಲ್ಲಾ ಕಾರಾಗೃಹದ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ನಿಮ್ಮ ದಿಗ್ವಿಜಯ ನ್ಯೂಸ್ ಸುದ್ದಿ ಬಿತ್ತರಿಸಿತ್ತು. ರಹಸ್ಯ ಕಾರ್ಯಚರಣೆ ನಡೆಸಿ ನಿರಂತರವಾಗಿ ಜೈಲಿನ ಅಕ್ರಮದ ಬಗ್ಗೆ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಜಿಲ್ಲಾ ಸಹಾಯಕ ಅಧೀಕ್ಷಕಿ ಶಾಂತಮ್ಮರನ್ನು ಎತ್ತಗಂಡಿ ಮಾಡಲಾಗಿದೆ.
ಆರೋಪ ಏನು?
ತುಮಕೂರು ಕಾರಾಗೃಹದಲ್ಲಿ ಕೈದಿಗಳನ್ನು ನೋಡಲು ಬರುವ ಕುಟುಂಬಸ್ಥರಿಂದ ಜೈಲಿನ ಸಿಬ್ಬಂದಿ ಹಣ ಪೀಕುತ್ತಿರುವ ಆರೋಪ ಕೇಳಿಬಂದಿತ್ತು. ಒಬ್ಬ ಕೈದಿಯನ್ನು ನೋಡಲು ಜೈಲಿನ ಸಿಬ್ಬಂದಿ 1150 ರೂ. ಲಂಚ ಪಡೆದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿ, ವೈರಲ್ ಆಗಿತ್ತು. ಕಾರಾಗೃಹದಲ್ಲಿನ ಅವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಸೇರಿದಂತೆ ಹಲವರಿಗೆ ಕೈದಿಗಳು ದೂರು ನೀಡಿದ್ದರು. ಜಿಲ್ಲಾಧಿಕಾರಿ, ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಎಡಿಜಿಪಿ, ಲೋಕಾಯುಕ್ತ, ಮಾನವಹಕ್ಕುಗಳ ಆಯೋಗ ಹಾಗೂ ಗೃಹಸಚಿವರಿಗೆ ಕೈದಿಗಳು ದೂರು ನೀಡಿದ್ದರು. ನಾಲ್ಕೈದು ಪುಟಗಳಲ್ಲಿ ಬಂಧಿಖಾನೆಯ ಸಮಸ್ಯೆಗಳ ವಿಸ್ಕೃತ ವಿವರಣೆ ನೀಡಿ, ಸುಮಾರು 40ಕ್ಕೂ ಹೆಚ್ಚು ಕೈದಿಗಳು ದೂರು ನೀಡಿದ್ದರು.
ಜಿಲ್ಲಾ ಕಾರಾಗೃಹವು ತುಮಕೂರು ತಾಲೂಕಿನ ಊರುಕೆರೆ ಬಳಿಯಿದೆ. ಕಾರಾಗೃಹದಲ್ಲಿ ಸಮರ್ಪಕವಾಗಿ ಊಟ ನೀಡುತ್ತಿಲ್ಲ ಎಂದು ಜೈಲು ಅಧೀಕ್ಷಕರ ವಿರುದ್ಧವು ಆರೋಪ ಮಾಡಿದ್ದರು. ಜೈಲಿಗೆ ಭೇಟಿ ನೀಡುವ ಎಲ್ಲಾ ಉನ್ನತ ಅಧಿಕಾರಿಗಳಿಗೆ ಮಾಸಿಕವಾಗಿ 1 ಲಕ್ಷ, 2 ಲಕ್ಷ ರೂ.ಗಳನ್ನು ಅಧಿಕಾರಿಗಳ ದರ್ಜೆಗೆ ತಕ್ಕಂತೆ ಲಂಚ ನೀಡುತ್ತಿದ್ದೇನೆ ಎಂದು ಅಧೀಕ್ಷಕಿ ಶಾಂತಶ್ರೀ ಹೇಳುತ್ತಾರೆ ಎಂದು ಆರೋಪ ಮಾಡಿದ್ದರು. ನೀವುಗಳು ಯಾವುದೇ ದೂರು ನೀಡಿದರೂ ಏನನ್ನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಎಲ್ಲಾ ಅಧಿಕಾರಿಗಳು ಇಲ್ಲಿಗೆ ಬರುವುದು ಮಾಮೂಲಿ ಲಂಚ ಪಡೆಯಲೇ ಹೊರತು ನಿಮ್ಮ ಯೋಗಕ್ಷೇಮ ವಿಚಾರಿಸಲು ಅಲ್ಲ. ಯಾವನಾದರೂ ದೂರು ನೀಡುವ ಸಾಹಸ ಮಾಡಿದರೆ, ಬಾಲಬಿಚ್ಚಿದರೆ ಅಂತಹವರ ಮನೆ ಮಠ ಮಾರಿಸುತ್ತೇನೆ. ಹೆಂಡತಿ ಮಕ್ಕಳನ್ನು ಅಡಮಾನ ಇರಿಸುತ್ತೇನೆ ಎಂದು ಅಧೀಕ್ಷಕಿ ಶಾಂತಶ್ರೀ ಅವಾಜ್ ಹಾಕಿದ್ದಾರಂತೆ.
ನೀವುಗಳು ಸಾಯುವವರೆಗೂ ಜೈಲಿನಲ್ಲೇ ಕೊಳೆಯವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುವ ಆರೋಪವೂ ಇದೆ. ಜಿಲ್ಲಾ ಕಾರಾಗೃಹದ ಕೈದಿಗಳಿಂದ ಹಾಗೂ ಸಂಬಂಧಿಕರಿಂದ ಹಣ ವಸೂಲಿ ಮಾಮೂಲಿಯಂತೆ. ಹಣ ನೀಡದಿದ್ದರೆ ಕೈದಿಗಳಿಗೆ ಮಾನಸಿಕ ಹಿಂಸೆ, ದೌರ್ಜನ್ಯ, ಶೋಷಣೆ ಮಾಡುತ್ತಿರುವ ಆರೋಪ ಕೇಳಿಬಂದಿತ್ತು. ಕಾರಾಗೃಹದಲ್ಲಿ ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ಆರೋಪವಿತ್ತು. ಕಾರಾಗೃಹದಲ್ಲಿ ನಡೆಯುತ್ತಿರುವ ದೌರ್ಜನ್ಯ, ಹಣ ವಸೂಲಿ, ಲಂಚದ ಬಗ್ಗೆ ಕೈದಿಗಳು ತಮ್ಮ ಹೆಸರು ಹಾಗೂ ನಂಬರ್ ಸಹಿತ ತುಮಕೂರು ಜಿಲ್ಲಾಧಿಕಾರಿ ಸೇರಿದಂತೆ ಹಲವರಿಗೆ ದೂರು ನೀಡಿದ್ದರು. ದೂರು ಕೊಡುತ್ತಿದ್ದಂತೆ ನ್ಯಾಯಾಂಗ ವ್ಯವಸ್ಥೆಯ ಅಧಿಕಾರಿಗಳು ಕಾರಾಗೃಹಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿ ಕೈದಿಗಳ ಹೇಳಿಕೆಗಳನ್ನು ಪಡೆದಿತ್ತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ತನಿಖೆ ನಡೆಸಿ, ಕಾನೂನು ಕ್ರಮ ಜರುಗಿಸುವಂತೆ ಕೈದಿಗಳು ಒತ್ತಾಯಿಸಿದ್ದರು. ಕಾರಾಗೃಹ ಅಧೀಕ್ಷಕಿ ಶಾಂತಶ್ರೀ ಮತ್ತು ಅವರ ಪಟಾಲಂ ವಿರುದ್ಧ ಕೈದಿಗಳು ಆಕ್ರೋಶ ಹೊರಹಾಕಿದ್ದರು. (ದಿಗ್ವಿಜಯ ನ್ಯೂಸ್)