ಮದುವೆಯಾಗಿ 4 ವರ್ಷ ಬಳಿಕ ಪ್ರಿಯಕರನ ವರಿಸಿದ ಯುವತಿ: ಹುಡುಗನ ಕಾಲಿಗೆ ಬಿದ್ದು ಗೋಗರೆದ ತಂದೆ!

Girl
Published on

ಬಾಗಲಕೋಟೆ: ತುಮಕೂರು ಮೂಲದ ಯುವತಿಯೊಬ್ಬಳು ಬಾಲ್ಯವಿವಾಹವನ್ನು ತ್ಯಜಿಸಿ ಪ್ರಿಯಕರನ ಕೈಹಿಡಿದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೇಲನಳ್ಳಿ ಗ್ರಾಮದ ಯುವತಿ ಐಶ್ವರ್ಯಾ ಮನೆಬಿಟ್ಟು ಬಂದು ಬಾಗಲಕೋಟೆಯ ನವನಗರದ ನಿವಾಸಿ ಆಕಾಶ್ ಜತೆ ಮದುವೆಯಾಗಿದ್ದಾಳೆ. ಮನೆಬಿಟ್ಟು ಬಂದಿರುವ ಮಗಳನ್ನು ಕರೆದೊಯ್ಯಲು ಓಡೋಡಿ ಬಂದಿರುವ ತಂದೆ ದೇವರಾಜ್​ ಮಗಳ ಪ್ರಿಯಕರ ಆಕಾಶ್ ಕಾಲು ಹಿಡಿದು ಮಗಳನ್ನು ಕಳಿಸಿಕೊಡುವಂತೆ ಕಣ್ಣೀರು ಹಾಕಿದ್ದಾರೆ.

ಬಾಗಲಕೋಟೆ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿ ಮುಂಭಾಗದಲ್ಲಿ ಐಶ್ವರ್ಯಾ ತಂದೆ ಬಿಕ್ಕಿಬಿಕ್ಕಿ ಅತ್ತರೂ, ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಇಬ್ಬರು ಮದುವೆಯಾದರು.

ನಾಲ್ಕು ವರ್ಷದ ಹಿಂದೆ ಆರಂಭವಾಗಿತ್ತು ಪ್ರೀತಿ

ನಾಲ್ಕು ವರ್ಷದ ಹಿಂದೆ ಚಿತ್ರದುರ್ಗದ ಕೋಟೆಯಲ್ಲಿ ಭೇಟಿಯಾದಾಗ ಪ್ರೀತಿ ಇಬ್ಬರು ನಡುವೆ ಪ್ರೀತಿ ಅರಳಿತ್ತು. ಬಳಿಕ ಪೋನ್​ನಲ್ಲಿ ಇಬ್ಬರು ಸದಾ ಸಂಪರ್ಕದಲ್ಲಿದ್ದರು. ಆಗಾಗ ಯುವತಿ ಇದ್ದಲ್ಲಿಗೆ ಹೋಗಿ ಆಕಾಶ್​ ಭೇಟಿ ಮಾಡುತ್ತಿದ್ದ. ಆದರೆ, 17 ವರ್ಷವಿದ್ದಾಗಲೇ ಯುವತಿಯನ್ನು ಬಾಲ್ಯವಿವಾಹ ಮಾಡಿಕೊಡಲಾಗಿತ್ತು. ಆದರೆ, ಬಾಲ್ಯವಿವಾಹ ಒಪ್ಪದ ಐಶ್ವರ್ಯಾ ಬಾಗಲಕೋಟೆ ಯುವಕನ ಜೊತೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಳು. ಇದರ ನಡುವೆ ಎರಡು ದಿನದ ಹಿಂದೆ ಐಶ್ವರ್ಯಾ ಬಾಗಲಕೋಟೆಗೆ ಬಂದಿದ್ದಳು. ಇಂದು ಪ್ರಿಯಕರನೊಂದಿಗೆ ವಿವಾಹವಾಗಿದ್ದಾಳೆ.

ವಿವಾಹದ ಬೆನ್ನಲ್ಲೇ ನಮಗೆ ಕುಟುಂಬದಿಂದ ಜೀವಬೆದರಿಕೆ ಇದೆ. ರಕ್ಷಣೆ ನೀಡಿ ಎಂದು ಐಶ್ವರ್ಯಾ-ಆಕಾಶ್​ ಪೊಲೀಸ್​ ವರಿಷ್ಠಾಧಿಕಾರಿ ಮೊರೆ ಹೋಗಿದ್ದಾರೆ. ಇನ್ನು ಆಕಾಶ್ ಹಾಗೂ ಐಶ್ವರ್ಯ ಬೇರೆ ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net