ತುಮಕೂರು: ಜಲಾಶಯ ತುಂಬಿದ್ಜಿದರೂ ತುಮಕೂರು ಜಿಲ್ಲೆಯ ಪಾಲಿನ ಹೇಮಾವತಿ ನೀರು ಹರಿಸಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿ ಮಾಜಿ ಸಚಿವ ಸೊಗಡು ಶಿವಣ್ಣ ಶನಿವಾರ ಸಂಜೆಯಿಂದಲೂ ಮಂಡ್ಯ ಜಿಲ್ಲೆಯ ನಾಗಮಂಗಲದ ಬಾಗೂರು ನವಿಲೆ ದಂಡೆ ಬಳಿಯೇ ಠಿಕಾಣಿ ಹೂಡಿದ್ದಾರೆ.
ಶನಿವಾರ ರಾತ್ರಿ ಪೂರ್ತಿ ಮಳೆಯಲ್ಲೇ ಬಾಗೂರು ನವಿಲೆ ಕಾಮಗಾರಿ ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಶಿವಣ್ಣ ತುಮಕೂರು ನಾಲೆಯಲ್ಲಿ ನೀರು ಹರಿಯುವವರೆಗೂ ಇಲ್ಲಿಂದ ತೆರಳುವುದಿಲ್ಲ ಎಂದು ನೀರು ಬಿಡಲು ಆಗ್ರಹಿಸಿದ್ದಾರೆ.
ಗೊರೂರುನಲ್ಲಿರುವ ಹೇಮಾವತಿ ಜಲಾಶಯ ಬಹುತೇಕ ಭರ್ತಿಯಾಗಿದ್ದರೂ, ತುಮಕೂರು ಜಿಲ್ಲೆಗೆ ಈವರೆವಿಗೂ ನೀರು ಹರಿಸಲು ಸರ್ಕಾರ ವಿಫಲವಾಗಿದ್ದು, ನಾಗಮಂಗಲದ ಕಡೆ ಮಾತ್ರ ಹೇಮಾವತಿ ನೀರು ಹರಿಸುತ್ತಿದೆ. ನಾಲೆ ಕಾಮಗಾರಿ ನೆಪ ಮಾಡಿಕೊಂಡು ತುಮಕೂರು ಜಿಲ್ಲೆಯ ಪಾಲಿನ ನೀರು ಹರಿಸಲು ತಡಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಕಾಮಗಾರಿ ಮುಗಿಸಿ ಶೀಘ್ರದಲ್ಲಿಯೇ ನೀರು ಹರಿಸಲಾಗುವುದು ಎಂದು ಅಧಿಕಾರಿಗಳು ಮನವಿ ಮಾಡಿದರೂ ಜಗ್ಗದ ಶಿವಣ್ಣ, ನಾಲೆಯಲ್ಲಿ ನೀರು ಹರಿಯುವವರೆಗೂ ಇಲ್ಲಿಯೇ ಇರುತ್ತೇನೆ ಎಂದು ಅಲ್ಲಿಯೇ ಉಳಿದಿದ್ದಾರೆ.
ಜಿಲ್ಲೆಯ ರೈತರು, ನಾಗರೀಕರು, ಜಾನುವಾರುಗಳು, ವ್ಯಾಪಾರ, ಕೈಗಾರಿಕೆ, ಶಿಕ್ಷಣ ಕ್ಷೇತ್ರಗಳ ಹಿತದೃಷ್ಟಿ ಮತ್ತು ನಮ್ಮ ಜಿಲ್ಲೆಗಾಗುವ ತೀವ್ರ, ಭಾರೀ ದುಷ್ಪರಿಣಾಮ ಉಂಟಾಗುತ್ತದೆ ಎಂದು ಆತ್ಮೀಯರು-ಹೋರಾಟ ಸಮಿತಿಯ ಪ್ರಮುಖರೊಂದಿಗೆ ಚರ್ಚಿಸಿ, ಭಾನುವಾರ ರಾತ್ರಿಯೂ ತುಮಕೂರಿಗೆ ಹೇಮಾವತಿ ನೀರು ಹರಿದು ಬರುವ ಬಾಗೂರು ನವಿಲೆಯ ಸ್ಥಳದಲ್ಲೇ ಇರುವುದಾಗಿ ಸೊಗಡು ಶಿವಣ್ಣ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಊರುಕೆರೆ ಗ್ರಾಪಂ ಮಾಜಿ ಉಪಾಧ್ಯಕ್ಷ ನಂಜುಂಡಪ್ಪ, ತಿಪಟೂರು ನಗರಸಭೆ ಮಾಜಿ ಸದಸ್ಯ ಎಂ.ಪಿ.ಪ್ರಸನ್ನಕುಮಾರ್ ಜತೆಗಿದ್ದಾರೆ.