

ತುಮಕೂರು: ತೀವ್ರ ಬರದ ನಡುವೆಯೂ ಜಿಲ್ಲೆಯ ವಿವಿಧೆಡೆಗಳಲ್ಲಿ ಸೋಮವಾರ ವಿಶಾಖ ಮಳೆಯ ದರ್ಶನವಾಗಿದೆ. ತುಮಕೂರಿನಲ್ಲಿ ಸೋಮವಾರ ಸಂಜೆ ನಿರಂತರವಾಗಿ 2 ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿಯಿತು.
ಅನಿರೀಕ್ಷಿತ ಭಾರಿ ಮಳೆಗೆ ನಗರವಾಸಿಗಳು ಪರದಾಡಿದರು, ನಗರದ ತಗ್ಗು ಪ್ರದೇಶಗಳು ಅಪರೂಪಕ್ಕೆ ಸಂಪೂರ್ಣ ಜಲಾವೃತವಾಗಿದ್ದವು. ಅಂತರಸನಹಳ್ಳಿ ಕೆಳ ಸೇತುವೆ ಸಂಪೂರ್ಣ ಜಲಾವೃತವಾಗಿತ್ತು.
ನಗರದ ಶೆಟ್ಟಿಹಳ್ಳಿ ಗೇಟ್ ಹಾಗೂ ಕುಣಿಗಲ್ ರಸ್ತೆಯ ಅಂಡರ್‌ಪಾಸ್‌ನಲ್ಲಿ 15 ಅಡಿಗೂ ಹೆಚ್ಚು ನೀರು ನಿಂತಿದ್ದು ಜನರಲ್ಲಿ ಭಯದ ವಾತಾವರಣ ಮೂಡಿಸಿತ್ತು. ಗಂಟೆಗೂ ಹೆಚ್ಚುಕಾಲ ಬ್ರಿಡ್ಜ್ ಸಂಪೂರ್ಣ ಜಲಾವೃತವಾಗಿತ್ತು.
ನಗರದ ನಜರಾಬಾದ್, ಹೆಗಡೆ ಕಾಲೋನಿ, ಪಿ.ಎಚ್.ಕಾಲೋನಿ, ಈದ್ಗಾ ಮೊಹಲ್ಲಾ, ಸಿದ್ಧಗಂಗಾ ಬಡಾವಣೆ, ಕೋತಿತೋಪು ಸೇರಿದಂತೆ ಕೊಳಗೇರಿಗಳ ಕೆಲವು ಮನೆಗಳಿಗೆ ನೀರು ನುಗ್ಗಿದ್ದು ಜನ ಪರದಾಡುವಂತಾಗಿತ್ತು.
ಜಿಲ್ಲೆಯಾದ್ಯಂತ ಚದುರಿದಂತೆ ಮಳೆಯಾಗಿದ್ದು ಬಹುತೇಕ ಕಡೆಗಳಲ್ಲಿ ಮಳೆ ಮುಂದುವರಿದಿದೆ. ನ.8ರ ವರೆಗೂ ಜಿಲ್ಲೆಯಲ್ಲಿ ಸಾಧಾರಣದಿಂದ ಭಾರಿ ಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈಗಾಗಲೇ ಜಿಲ್ಲೆಯ ತಾಲೂಕುಗಳಲ್ಲಿ ಬೆಳೆ ಕಳೆದುಕೊಂಡು ಬರದ ಛಾಯೆಯಲ್ಲಿರುವ ಜನರು ಕೆರೆ, ಕಟ್ಟೆಗಾದರೂ ನೀರು ಬಂದರೆ ಜನುವಾರು, ಕೊಳವೆಬಾವಿಗಳಾದರೂ ಉಸಿರಾಡಲಿವೆ ಎಂಬ ಆಸೆಯಿಂದ ನೋಡುತ್ತಿದ್ದಾರೆ.
ಇಂದು ಚಿಕ್ಕನಾಯಕನಹಳ್ಳಿಯಲ್ಲಿ 15.5ಮಿಮೀ, ಗುಬ್ಬಿ 12.4, ಕೊರಟಗೆರೆ 23.3, ಕುಣಿಗಲ್ 8.9, ಮಧುಗಿರಿ 25.2, ಪಾವಗಡ 32.5, ಶಿರಾ 20.5, ತಿಪಟೂರು 16.4, ತುರುವೇಕೆರೆ 12.5 ಹಾಗೂ ತುಮಕೂರು ತಾಲೂಕಿನಲ್ಲಿ 23.0ಮಿಮೀ ಮಳೆಯಾಗುವ ನಿರೀಕ್ಷೆಯಿದೆ.