

ಸುಬ್ರಹ್ಮಣ್ಯ: ಆಧುನಿಕ ಜಂಜಾಟದಲ್ಲಿ ನಾವು ಸಾಂಪ್ರದಾಯಿಕ ಆಚರಣೆ ಹಾಗೂ ಜನಪದೀಯ ವಿಚಾರಗಳನ್ನು ಮೈಗೂಡಿ ಸಿಕೊಳ್ಳಬೇಕು. ತುಳುನಾಡಿನ ವಿಶೇಷ ಸಂಸ್ಕೃತಿ ಬಗ್ಗೆ ಯುವ ಜನತೆಗೆ ತಿಳಿಸಿ ಅವರಲ್ಲಿ ಜಾಗೃತಿ ಮೂಡಿಸಬೇಕು. ಪ್ರಾಚೀನ ತುಳುನಾಡ ಜನಪದೀಯ ಆಚರಣೆ ನಮ್ಮ ಭವಿಷ್ಯಕ್ಕೆ ದಾರಿದೀಪ. ಅವುಗಳನ್ನು ಮುಂದಿನ ಪೀಳಿಗೆಯೂ ಬೆಳೆಸಿಕೊಳ್ಳಬೇಕು ಎಂದು ಸುಬ್ರಹ್ಮಣ್ಯ ಎಸ್ಎಸ್ಪಿಯು ಕಾಲೇಜಿನ ಉಪನ್ಯಾಸಕ ಮತ್ತು ಪತ್ರಕರ್ತ ರತ್ನಾಕರ ಸುಬ್ರಹ್ಮಣ್ಯ ಹೇಳಿದರು.
ಶ್ರೀವಾಣಿ ವನಿತಾ ಸಮಾಜ ಸುಬ್ರಹ್ಮಣ್ಯ, ಶ್ರೀ ಶಕ್ತಿ ಅಂಬಿಕಾ ಗೊಂಚಲು ಸಮಿತಿ ಸುಬ್ರಹ್ಮಣ್ಯ, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ, ಅಂಗನವಾಡಿ ಕೇಂದ್ರ ಸುಬ್ರಹ್ಮಣ್ಯ ಆಶ್ರಯದಲ್ಲಿ ಆಟಿದ ಪರ್ಬ ಉದ್ಘಾಟಿಸಿ ಮಾತನಾಡಿದರು.
ಚೆನ್ನಮಣೆ ಆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಬಳಿಕ ಸಾಂಪ್ರದಾಯಿಕವಾಗಿ ಕೊಟ್ಟಿಗೆ ಕಟ್ಟುವುದು, ಚೆನ್ನಮಣೆ, ಜನಪದ ಹಾಡು, ಅದೃಷ್ಟ ಮಹಿಳೆ, ಆಟಿದ ಅಟಿಲು ಸ್ಪರ್ಧೆ ನಡೆಯಿತು.
ಬಾಳಿಲದ ಆಯುಷ್ಮಾನ್ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ ಜ್ಯೋತಿ ಎಂ.ಜೆ.ಆಟಿಯ ಬಗ್ಗೆ ಮಾಹಿತಿ ನೀಡಿದರು. ಶ್ರೀ ವಾಣಿ ವನಿತಾ ಸಮಾಜದ ಅಧ್ಯಕ್ಷೆ ಪುಷ್ಪಾ ಕೆ.ಎಸ್.ಅಧ್ಯಕ್ಷತೆ ವಹಿಸಿದ್ದರು. ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಶೋಭಾ ನಲ್ಲೂರಾಯ, ಅಂಗನವಾಡಿ ಶಿಕ್ಷಕಿ ವಿಶಾಲಾಕ್ಷಿ, ವಾಣಿವನಿತಾ ಸಮಾಜದ ಕಾರ್ಯದರ್ಶಿ ಸುಜಾತಾ ಗಣೇಶ್, ಪ್ರಮುಖರಾದ ತ್ರೀವೇಣಿ ದಾಮ್ಲೆ, ಸುಭಾಷಿಣಿ ಶಿವರಾಂ, ಚಂದ್ರಕಲಾ ಸುಬ್ರಹ್ಮಣ್ಯ ನೂಚಿಲ, ಸವಿತಾ ಭಟ್, ರತ್ನಕುಮಾರಿ ನೂಚಿಲ ಉಪಸ್ಥಿತರಿದ್ದರು.