ತುಳು ಅಧಿಕೃತ ಭಾಷೆ ಸ್ಥಾನಮಾನ ಸನ್ನಿಹಿತ: ದಶಕಗಳ ಹೋರಾಟಕ್ಕೆ ಮನ್ನಣೆ ನಿರೀಕ್ಷೆ

blank

– ರಾಜೇಶ್ ಶೆಟ್ಟಿ ದೋಟ, ಮಂಗಳೂರು

blank

ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ತುಳುವನ್ನು ಪರಿಗಣಿಸುವ ನಿಟ್ಟಿನಲ್ಲಿ ಇದೀಗ ನಿರೀಕ್ಷಿತ ಬೆಳವಣಿಗೆಗಳಾಗುತ್ತಿದ್ದು, ತುಳುವರಲ್ಲಿ ಹೊಸ ಆಶಾಭಾವನೆ ಗರಿಗೆದರಿದೆ.

ತುಳುವನ್ನು ಅಧಿಕೃತ ಭಾಷೆಯನ್ನಾಗಿಸುವಂತೆ 20-25 ವರ್ಷಗಳಿಂದ ಒತ್ತಾಯ, ಪ್ರಯತ್ನ, ಹೋರಾಟ ನಡೆಯುತ್ತಿದ್ದರೂ, ಈವರೆಗೂ ಕೈಗೂಡಿರಲಿಲ್ಲ. ಇತ್ತೀಚೆಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಕರಾವಳಿಯ ಶಾಸಕರು ಈ ಬಗ್ಗೆ ಧ್ವನಿಯೆತ್ತಿದ್ದು, ರಾಜಕೀಯ ಹಸ್ತಕ್ಷೇಪವಾಗದೇ ಇದ್ದರೆ ಹೋರಾಟ ಒಂದು ಹಂತದಲ್ಲಿ ಯಶಸ್ಸಿನ ರೂಪು ಪಡೆದುಕೊಳ್ಳಲಿದೆ.

ಹೋರಾಟದ ಹಂತ: ತುಳುನಾಡಿನಾದ್ಯಂತ ವಿವಿಧ ರೀತಿಯ ಹೋರಾಟಗಳು ಈಗಾಗಲೇ ನಡೆದಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಬಗೆಗಿನ ಅಭಿಪ್ರಾಯವನ್ನು ಸಂಸದೀಯ ಇಲಾಖೆಯಲ್ಲಿ ಮಂಡಿಸಿ ಕಾನೂನು ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಸಂವಿಧಾನದ ಅನುಚ್ಛೇದ 345, 346 ಮತ್ತು 347ರಡಿ ಒಂದಕ್ಕಿಂತ ಹೆಚ್ಚು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯೆಂದು ಘೋಷಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಕಾನೂನು ಇಲಾಖೆ ಸ್ಪಷ್ಟಪಡಿಸಿತ್ತು. ಅಲ್ಲದೆ ಕಾನೂನಿನ ಚೌಕಟ್ಟಿನಲ್ಲಿ ಆಗುವ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಿ ವಾಸ್ತವಾಂಶದ ವರದಿಯನ್ನು ಸೂಕ್ತ ಶಿಫಾರಸಿನೊಂದಿಗೆ ಸಲ್ಲಿಸಲು ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕರಿಗೆ ಸೂಚಿಸಿತ್ತು. ಅದರಂತೆ ಬಸವರಾಜ ಬೊಮ್ಮಾಯಿ ನೇತೃತ್ವದ ಆಗಿನ ರಾಜ್ಯ ಸರ್ಕಾರ ಡಾ.ಎಂ.ಮೋಹನ ಆಳ್ವ ನೇತೃತ್ವದ ಅಧ್ಯಯನ ಸಮಿತಿ ರಚಿಸಿತ್ತು. ಆ ಸಮಿತಿ ರಾಜ್ಯದ ಅಧಿಕೃತ ಭಾಷೆಯಾಗಿಸಲು ತುಳು ಅತ್ಯಂತ ಯೋಗ್ಯ ಎಂಬ ಮಹತ್ವಪೂರ್ಣ ಮಾಹಿತಿ ಒದಗಿಸಿತ್ತು. ಆ ವರದಿಯನ್ನು ಕಾನೂನು ಇಲಾಖೆಗೆ ಸಲ್ಲಿಸಲಾಗಿದೆ.

ರಾಜ್ಯಗಳಿಂದ ವರದಿ: ಬಳಿಕ ಕಾನೂನು ಇಲಾಖೆ ಈಗಾಗಲೇ ಒಂದಕ್ಕಿಂತ ಹೆಚ್ಚು ಅಧಿಕೃತ ಭಾಷೆಯನ್ನು ಅಳವಡಿಸಿಕೊಂಡಿರುವ ರಾಜ್ಯ ಸರ್ಕಾರಗಳ ಮಾಹಿತಿ ಹಾಗೂ ವಿವರವನ್ನು ಪಡೆದುಕೊಳ್ಳುವಂತೆ ಸೂಚಿಸಿತ್ತು. ಅದರಂತೆ ಸರ್ಕಾರವು ಬಿಹಾರ, ಪಶ್ಚಿಮಬಂಗಾಲ ಮತ್ತು ಆಂಧ್ರಪ್ರದೇಶದಿಂದ ಮಾಹಿತಿ ಒದಗಿಸುವಂತೆ ಕೇಳಿಕೊಂಡಿತ್ತು. ಆಂಧ್ರಪ್ರದೇಶ ಸೂಕ್ತ ಮಾಹಿತಿ ನೀಡಿತಾದರೂ, ಬಿಹಾರ, ಪಶ್ಚಿಮ ಬಂಗಾಲ ಸಮರ್ಪಕ ವರದಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಸ್ವಂತ ಖರ್ಚಿನಲ್ಲಿ ಐವರ ತಂಡವನ್ನು ಆ ರಾಜ್ಯಗಳಿಗೆ ಕಳುಹಿಸಿ ಮಾಹಿತಿ ಕಲೆ ಹಾಕಿ ವರದಿ ಸಲ್ಲಿಸಿದ್ದರು.

ಮುಂದಿನ ಪ್ರಕ್ರಿಯೆ: ಸದ್ಯ ಈ ವರದಿಯನ್ನು ಕಾನೂನು ಇಲಾಖೆ ಮುಂದಿದ್ದು, ಅಲ್ಲಿ ಪ್ರಕ್ರಿಯೆಯಲ್ಲಿದೆ. ವಿಧಾನಮಂಡಲದಲ್ಲಿ ಆದ ನಿರ್ಣಯದಂತೆ ಸದ್ಯದಲ್ಲೇ ಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಈ ಭಾಗದ ಸಚಿವರ ಸಭೆ ನಡೆಯಲಿದ್ದು, ಬಳಿಕ ಮುಂದಿನ ನಡೆ ನಿರ್ಣಯವಾಗಲಿದೆ.

ಏನು ಉಪಯೋಗ?: ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ತುಳುವಿಗೆ ಸ್ಥಾನ ಲಭಿಸಿದರೆ ವಸತಿ, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ಕಡಿಮೆ ಬಡ್ಡಿ, ರಿಯಾಯಿತಿ ಸವಲತ್ತುಗಳನ್ನು ಪಡೆಯುವ ಅರ್ಹತೆ ಅಲ್ಪಸಂಖ್ಯಾತ ಭಾಷಿಗರಾದ ತುಳುವರಿಗೆ ಲಭಿಸಲಿದೆ. ರಾಜ್ಯ ಸರ್ಕಾರ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ನೇಮಿಸುವ ಸಲಹಾ ಮಂಡಳಿಯಲ್ಲಿ ಅರ್ಹತೆ ಆಧಾರದ ಮೇಲೆ ತುಳುವರ ನೇಮಕ ನಡೆಯಲಿದೆ. ಸರ್ಕಾರದ ಪ್ರಕಟಣೆಗಳು, ಸುತ್ತೋಲೆಗಳು ತುಳುವಿನಲ್ಲೂ ಪ್ರಕಟವಾಗುವುದು. ವಿವಿಧ ಇಲಾಖೆಗಳೊಂದಿಗೆ ಸಂವಹನ ಸುಲಭವಾಗುತ್ತದೆ. ಆಡಳಿತ, ವ್ಯವಹಾರಗಳು ಹೆಚ್ಚು ಜನಸ್ನೇಹಿಯಾಗುತ್ತದೆ. ರಾಜ್ಯದ ಸಾಂಸ್ಕೃತಿಕ ಉತ್ಸವಗಳಲ್ಲಿ ತುಳು ಕಲಾವಿದರು ಪಾಲ್ಗೊಳ್ಳಲು ಅಧಿಕೃತ ಅವಕಾಶ ಲಭಿಸುವ ಜತೆಗೆ ತುಳು ಭಾಷೆ, ಸಂಸ್ಕೃತಿಗಾಗಿ ದುಡಿಯುವ ಸಂಸ್ಥೆ, ಸಂಘಟನೆಗಳಿಗೆ ಅನುದಾನ ದೊರೆಯುತ್ತದೆ. ಸರ್ಕಾರಿ ಪ್ರಶಸ್ತಿ ನೀಡುವಾಗ ತುಳು ಭಾಷಿಗರಿಗೂ ಆದ್ಯತೆ ಲಭಿಸಲಿದೆ. ತುಳು ಲಿಪಿಯಲ್ಲಿರುವ ಸಹಸ್ರಾರು ತಾಳೆಗ್ರಂಥಗಳಿಗೆ ಅಧಿಕೃತ ಮಾನ್ಯತೆ ಸಿಗುತ್ತದೆ. ತುಳು ಭಾಷೆಯ ಕೃತಿಗಳನ್ನೂ ಪ್ರಶಸ್ತಿ, ಬಹುಮಾನಗಳಿಗೆ ಮಾನ್ಯ ಮಾಡಲಾಗುತ್ತದೆ. ಬಳಿಕ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಅಧಿಕೃತ ಭಾಷೆಯಾಗಿ ಸೇರ್ಪಡೆಗೂ ಇದು ಪೂರಕವಾಗಲಿದೆ.

ಆದ್ಯತೆಯ ಪರಿಗಣನೆ

ರಾಜ್ಯದಲ್ಲಿ ಕೊಡವ, ಲಂಬಾಣಿ, ತಾಂಡಾ ಮತ್ತಿತರ ಭಾಷೆಗಳಿಗೆ ಮನ್ನಣೆಯ ಬೇಡಿಕೆ ಇದೆಯಾದರೂ ತುಳುವನ್ನು ಆದ್ಯತೆಯಲ್ಲಿ ಪರಿಗಣಿಸಬೇಕೆನ್ನುವುದು ತುಳುವರ ಆಗ್ರಹ. ಏಕೆಂದರೆ, ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಪ್ರಾಚೀನತೆ, ವ್ಯಾಪ್ತಿ, ಲಿಪಿ, ಅಕಾಡೆಮಿ ಹೊಂದಿದೆ. ಶಾಲೆಗಳಲ್ಲೂ ಐಚ್ಛಿಕ ಭಾಷೆಯನ್ನಾಗಿ ತುಳುವನ್ನು ಬೋಧಿಸಲಾಗುತ್ತಿದೆ. 2017-18ನೇ ಸಾಲಿನಿಂದ ಮಂಗಳೂರು ವಿವಿ ತುಳು ಎಂಎಯನ್ನೂ ಆರಂಭಿಸಿದೆ. ಸಾಹಿತ್ಯಪರ ಸಮೃದ್ಧ ಕಾರ್ಯಗಳು ಈಗಾಗಲೇ ನಡೆದಿವೆ. ಇತ್ತೀಚೆಗೆ ಗೂಗಲ್‌ನಲ್ಲಿ ತುಳು ಭಾಷಾಂತರ ಆಯ್ಕೆ ಅವಕಾಶವೂ ಲಭಿಸಿದೆ. ಈ ಹಿನ್ನೆಲೆಯಲ್ಲಿ ತುಳು ಆದ್ಯತೆಯಾಗಿ ಪರಿಗಣನೆಯಾಗಲಿದೆ.

ಸದನದ ಮೊದಲ ಅಧಿವೇಶನದಲ್ಲೇ ಧ್ವನಿ ಎತ್ತಿದ್ದೇನೆ. ಆದಷ್ಟು ಶೀಘ್ರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ. ಇದರಿಂದ ಸರ್ಕಾರಕ್ಕೆ ಹಣಕಾಸಿನ ಒತ್ತಡ ಬರುವುದಿಲ್ಲ. ಸರ್ಕಾರ ಮುಂದುವರಿದ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
– ಅಶೋಕ್ ಕುಮಾರ್ ರೈ, ಪುತ್ತೂರು ಶಾಸಕ

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank