ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಕೆಲವೊಮ್ಮೆ ಪರಿಸ್ಥಿತಿಗಳು, ಕೆಲ ಸಂದರ್ಭಗಳು ಉತ್ತಮ ಗೆಳೆಯರನ್ನೂ ಶತ್ರುಗಳನ್ನಾಗಿ ಮಾಡಿಬಿಡುತ್ತವೆ. ಇದೀಗ “ಯುಐ’ ಮತ್ತು “ಮ್ಯಾಕ್ಸ್’ ಚಿತ್ರಗಳ ನಡುವಿನ ಬಾಕ್ಸಾಫಿಸ್ ಗುದ್ದಾಟ, ಉಪೇಂದ್ರ ಮತ್ತು ಕಿಚ್ಚ ಸುದೀಪ್ ನಡುವೆ ಕಂದಕ ಸೃಷ್ಟಿಸಿದೆಯಾ ಎಂಬ ಪ್ರಶ್ನೆ ಮೂಡಿಸಿದೆ. ಕಳೆದ ಡಿ. 20ರಂದು “ಯುಐ’ ರಿಲೀಸ್ ಡೇಟ್ ಘೋಷಿಸಲಾಗಿತ್ತು. ಅದರ ಬೆನ್ನಲ್ಲೇ “ಮ್ಯಾಕ್ಸ್’ ಡಿ. 25ರಂದು ತೆರೆಗೆ ಬರಲಿದೆ ಎಂದು ಅನೌನ್ಸ್ ಮಾಡಲಾಯಿತು. ಆಗಲೇ “ಯುಐ’ ನಿರ್ಮಾಪಕರಲ್ಲಿ ಒಬ್ಬರಾದ ಕೆ.ಪಿ. ಶ್ರೀಕಾಂತ್, “ಯುಐ’ ರಿಲೀಸ್ ಆಗಿ ಕೇವಲ ಐದು ದಿನಗಳ ಅಂತರದಲ್ಲಿ “ಮ್ಯಾಕ್ಸ್’ ಬಿಡುಗಡೆಯಾಗುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಇನ್ನೂ ಪ್ರೇಕ್ಷಕರನ್ನು ಥಿಯೇಟರ್ಗಳಿಗೆ ಕರೆತರಲು ಹರಸಾಹಸಪಡುತ್ತಿರುವ ಸಮಯದಲ್ಲಿ ಬಾಕ್ಸಾಫಿಸ್ ಸಮರ ಬೇಕಿರಲಿಲ್ಲ ಎಂಬ ಮಾತುಗಳೂ ಚಿತ್ರರಂಗ ಮತ್ತು ಅಭಿಮಾನಿ ವಲಯಗಳಲ್ಲಿ ಕೇಳಿಬಂದವು. ಹಾಗಾದರೆ “ಯುಐ’ ವರ್ಸಸ್ “ಮ್ಯಾಕ್ಸ್’ ಎಲ್ಲಿಯವರೆಗೆ ಬಂತು?
ಉಪೇಂದ್ರ ನನ್ನ ಗುರು…
ನಟ ಕಿಚ್ಚ ಸುದೀಪ್ ಡಿ.1ರಂದು “ಮ್ಯಾಕ್ಸ್’ ಚಿತ್ರದ ಸಾಂಗ್ ರಿಲೀಸ್ ವೇಳೆ, “ಉಪೇಂದ್ರ ಅವರ ಸ್ಟಾರ್ಡಂ ಬಗ್ಗೆ ನನಗೆ ಯಾವತ್ತೂ ಡೌಟ್ ಇಲ್ಲ. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ನಾವೆಲ್ಲರೂ ಅವರನ್ನು ನೋಡಿ ಕಲಿತು ಚಿತ್ರರಂಗಕ್ಕೆ ಬಂದವರು. “ಮ್ಯಾಕ್ಸ್’ ರಿಲೀಸ್ ಬಗ್ಗೆ ಉಪೇಂದ್ರ ಅವರಿಗೆ ತಲೆನೋವಿಲ್ಲ. ನಮಗೇಕೆ? ನನಗೆ ಅವರ ಮೇಲೆ ಅಪಾರ ಗೌರವ, ಪ್ರೀತಿಯಿದೆ. ನಾನು ಸಿನಿಮಾ ಮಾಡಬಹುದು. ಅದಕ್ಕೆ ಹಣ ಹಾಕುತ್ತಿರುವುದು ನಿರ್ಮಾಪಕರು. ಆಗಸ್ಟ್ನಲ್ಲಿ ರಿಲೀಸ್ ಮಾಡಲು ತುಂಬ ಪ್ರಯತ್ನಪಟ್ಟೆವು. ಆಗ ಒಂದು ತಿಂಗಳು ಮುಂದೂಡಿ ಅಂದಿದ್ದೆ. ಆದರೆ, ಕೊನೆಗೆ ನಿರ್ಮಾಪಕರು ಡಿ.25ರಂದು ಬಿಡುಗಡೆ ಮಾಡಲು ನಿರ್ಧರಿಸಿದರು. ಉಪೇಂದ್ರ ಸರ್ಗೆ ತೊಂದರೆ ಆಗುತ್ತಿದೆ ಅಂದರೆ, ಆಗ ನಾನು ಮಾತನಾಡುತ್ತೇನೆ. ಅವರು ನನ್ನ ಗುರುಗಳು. ನಾನು ಶಿಷ್ಯ’ ಎಂದು ಹೇಳಿದ್ದರು. ಹಾಗೇ ಡಿ. 23ರಂದು “ಯುಐ’ ಸಿನಿಮಾ ನೋಡಿದ ಸುದೀಪ್, “ಈ ರೀತಿಯ ಕಥೆಯನ್ನು ಸಿನಿಮಾ ಮಾಡಲು ಕೇವಲ ಉಪೇಂದ್ರ ಸರ್ಗಷ್ಟೇ ಸಾಧ್ಯ. ಚಿತ್ರದ ಬಗ್ಗೆ ಎಲ್ಲೆಡೆಯಿಂದ ಉತ್ತಮ ಮಾತುಗಳು ಕೇಳಿಬರುತ್ತಿವೆ’ ಎಂದು ಚಿತ್ರತಂಡಕ್ಕೆ ಶುಭಹಾರೈಸಿದ್ದರು.
ಅವರಿಗೂ ಒಳಿತಾಗಲಿ…
“ಯುಐ’ ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಡಿ. 2ರಂದು ಚಿತ್ರದ ಸುದ್ದಿಗೋಷ್ಠಿಯ ವೇಳೆ, “ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ಇಬ್ಬರೂ ನಿರ್ಮಾಪಕರನ್ನು ಕರೆದು ಮಾತನಾಡಬಹುದಿತ್ತು. ನಾವು ಡಿ. 20ರಂದು ರಿಲೀಸ್ ಅಂತ ಮೂರು ತಿಂಗಳ ಹಿಂದೆಯೇ ಘೋಷಿಸಿದ್ದವು. ಸುದೀಪ್ ಅವರ ಬಳಿ ಕೂಡ ಮಾತನಾಡಿದ್ದೆವು. ಆದರೆ, ಆಗ ಅವರಿಗೂ ಡಿ. 25ರಂದು ಚಿತ್ರ ಬಿಡುಗಡೆ ಅಂತ ಗೊತ್ತಿರಲಿಲ್ಲ’ ಎಂದಿದ್ದರು. ಉಪೇಂದ್ರ, “ಎರಡು ಸಿನಿಮಾ ರಿಲೀಸ್ ಆಗಿ, ಎರಡೂ ಸೂಪರ್ಹಿಟ್ ಆಗಿರುವ ಹಲವು ಉದಾಹರಣೆಗಳಿವೆ. ಅವರ ಚಿತ್ರಕ್ಕೂ ಒಳ್ಳೆಯದಾಗಲಿ’ ಎಂದು ಶಭಹಾರೈಸಿದ್ದರು.
ರಿಲೀಸ್ ಬಳಿಕ ಮುನಿಸು..?
ಇನ್ನು ಡಿ. 29ರಂದು “ಯುಐ’ ಚಿತ್ರದ ಸಕ್ಸಸ್ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ ಉಪೇಂದ್ರ, “ನಮಗೆ ಗೊತ್ತೇಯಿಲ್ಲ. ಪಕ್ಕದಲ್ಲಿ ಯಾವ ಸಿನಿಮಾ ರಿಲೀಸ್ ಆಗಿದೆ ಅಂತ. ನಮಗೆ “ಯುಐ’ ಬಗ್ಗೆ ಮಾತ್ರ ಗೊತ್ತು. ಮಾರ್ಕೆಟ್ ಇದು, ಇಲ್ಲಿ ನಾವು ಅಂಗಡಿ ಮಾಡಿದರೆ, ಪಕ್ಕದಲ್ಲಿ ಇನ್ನೊಬ್ಬ ಬಂದು ಅಂಗಡಿ ಇಡುತ್ತಾನೆ. ತೆಲುಗು, ತಮಿಳು ಚಿತ್ರಗಳೂ ರಿಲೀಸ್ ಆಗುತ್ತಿರುತ್ತವೆ. ನಮಗೂ ಅದಕ್ಕೂ ಸಂಬಂಧವಿಲ್ಲ. ನಮ್ಮ ಸಿನಿಮಾ ಬಗ್ಗೆ ನಾವು ಮಾತನಾಡುತ್ತೇವಷ್ಟೇ’ ಎಂದಿದ್ದರು.
ದಾಖಲೆ ಯಾರದು?
ಇನ್ನು ಬಾಕ್ಸಾಫಿಸ್ ಗಳಿಕೆ, ಟಿಕೆಟ್ ಬುಕ್ಕಿಂಗ್ ಬಗ್ಗೆಯೂ ಎರಡು ತಂಡಗಳ ನಡುವೆ ಜುಗಲ್ಬಂದಿ ನಡೆದಿದೆ. 2024ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿಕೊಂಡ ಸಿನಿಮಾ, ಆನ್ಲೈನ್ನಲ್ಲಿ ಆರು ಲಕ್ಷ ಟಿಕೆಟ್ ಮಾರಾಟ ಮಾಡಿದ, ಅತಿ ಹೆಚ್ಚು ಪ್ರೇಕ್ಷಕರು ನೋಡಿದ ಸಿನಿಮಾ ಅಂತೆಲ್ಲ ದಾಖಲೆಗಳ ಬಗ್ಗೆ ಎರಡು ತಂಡಗಳೂ ಸಂಭ್ರಮಿಸುತ್ತಿವೆ. ಅದೇನೇ ಇರಲಿ, ಈ ಸ್ಟಾರ್ ಚಿತ್ರಗಳ ಕ್ಲ್ಯಾಷ್, ಸ್ಟಾರ್ಗಳ ಕ್ಲ್ಯಾಷ್ ಆಗದಿರಲಿ ಎಂಬುದು ಅವರ ಅಭಿಮಾನಿಗಳ ಅಭಿಮತ.