ಆಚರಣೆಯಲ್ಲಿದೆ ವೈಜ್ಞಾನಿಕ ಸತ್ವ : ನಾರಾಯಣ ರೈ ಕುಕ್ಕುವಳ್ಳಿ ಅನಿಸಿಕೆ

New Project (3)
Published on

ವಿಜಯವಾಣಿ ಸುದ್ದಿಜಾಲ ಕಡಬ

ರಾಮಕುಂಜ ಗ್ರಾಮದ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತುಡರ ಹಬ್ಬವನ್ನು ಆಚರಿಸಲಾಯಿತು. ಸಾಹಿತಿ, ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಶಾಲೆಯಲ್ಲಿರುವ ತುಳುನಾಡಿನ ವಸ್ತು ಸಂಗ್ರಹಾಲಯದಲ್ಲಿ ಪೂಜೆ ನೆರವೇರಿಸಿ ಮಾತನಾಡಿ, ತುಳುನಾಡಿನ ಪ್ರತಿಯೊಂದು ಆಚರಣೆಯಲ್ಲಿ ಧಾರ್ಮಿಕ, ವೈಜ್ಞಾನಿಕ ಸತ್ವ ಅಡಗಿದೆ. ಆಚರಣೆಗಳು ತೆರೆಮರೆಗೆ ಸರಿಯುವ ಕಾಲಘಟ್ಟದಲ್ಲಿ ತುಳುನಾಡಿನಲ್ಲಿ ಹಿರಿಯರು ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳಿಗೆ ತಿಳಿ ಹೇಳುವ ಮುಖಾಂತರ ಮುಂದಿನ ಪೀಳಿಗೆಗೆ ಪಸರಿಸುವ ಉದ್ದೇಶದಿಂದ ಸಾಂಪ್ರದಾಯಿಕ ಆಚರಣೆಗಳನ್ನು ಸಂಸ್ಥೆಯಲ್ಲಿ ನಡೆಯುತ್ತಿರುವುದು ಶ್ಲಾಘನೀಯ. ತುಳುನಾಡು ಹಾಗೂ ದೇಶದ ಸಂಸ್ಕೃತಿಯನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದರು.

ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಬಾರಿಂಜ ಗೋಪೂಜೆ ನೆರವೇರಿಸಿ ಮಾತನಾಡಿ, ನಮ್ಮ ಆಚರಣೆಯನ್ನು ಮರೆಯುತ್ತಾ ಬಂದಿದ್ದೇವೆ. ಇಂತಹ ಸಂದರ್ಭದಲ್ಲಿ ಗೋಪೂಜೆಯನ್ನು ಹಾಗೂ ತುಳಸಿ ಪೂಜೆಯಂತಹ ಅರ್ಥಪೂರ್ಣವಾದ ಆಚರಣೆಯನ್ನು ಸಂಸ್ಥೆ ಆಚರಿಸಿಕೊಂಡು ಬರುತ್ತಿದೆ. ವಿದ್ಯಾರ್ಥಿಗಳೆಲ್ಲರು ಓದಿನೊಂದಿಗೆ ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಪ್ರಜೆಯಾಗಬೇಕೆಂದು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಏರ್ಪಡಿಸಿದ ವಿವಿಧ ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಆಡಳಿತಾಧಿಕಾರಿ ಆನಂದ್ ಎಸ್.ಟಿ., ಶ್ರೀ ರಾಮಕುಂಜೇಶ್ವರ ವಿದ್ಯಾಲಯದ ಪ್ರಾಂಶುಪಾಲ ಪ್ರವೀಧ್ ಪಿ., ಶಿಕ್ಷಕ-ರಕ್ಷಕ ಸಂಘದ ಜತೆಕಾರ್ಯದರ್ಶಿ ಸೌಮ್ಯ, ಶಿಕ್ಷಕ ರಕ್ಷಕ ಸಂಘದ ಸದಸ್ಯ ಆನಂದ್ ರೇಷ್ಮಾ, ಸಂಸ್ಥೆಯ ವ್ಯವಸ್ಥಾಪಕ ರಮೇಶ್ ರೈ ಆರ್.ಬಿ. ಉಪಸ್ಥಿತರಿದ್ದರು. ದೀಪಾವಳಿ ಹಬ್ಬದ ವಿಶೇಷ ತಿನಿಸು ಅವಲಕ್ಕಿ, ಬಾಳೆಹಣ್ಣಿನ ರಸಾಯನವನ್ನು ಎಲ್ಲರಿಗೂ ಉಣಬಡಿಸಲಾಯಿತು. ವಿಶೇಷ ಸಿಡಿಮದ್ದು ಪ್ರದರ್ಶನ ನಡೆಯಿತು. ಮುಖ್ಯಗುರು ಗಾಯತ್ರಿ ಯು.ಎನ್.ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ಲೋಹಿತಾ ಎ.ವಂದಿಸಿದರು. ಶಿಕ್ಷಕಿಯರಾದ ಸರಿತಾ, ಸಂಚಿತಾ, ಪವಿತ್ರ, ಭವ್ಯ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net