TT#50 ಚಿತ್ರದಲ್ಲಿ ಟೆಂಪೋ ಟ್ರಾವೆಲರ್​ ಪಾತ್ರವೇ ಪ್ರಧಾನ; ಇದೇ ತಿಂಗಳ 13ಕ್ಕೆ ತೆರೆಗೆ

TT 50 - Final
Published on

ಬೆಂಗಳೂರು: ಟೆಂಪೋ ಟ್ರಾವೆಲರ್​ ವಾಹನವನ್ನೇ ಪ್ರಧಾನವಾಗಿಟ್ಟುಕೊಂಡು ಮೂಡಿಬಂದಿದೆ ‘TT #50’ ಸಿನಿಮಾ. ಬಹುತೇಕ ಚಿತ್ರೀಕರಣ ಕೆಲಸಗಳನ್ನು ಮುಗಿಸಿಕೊಂಡಿರುವ ಈ ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಇದೇ ತಿಂಗಳು 13ಕ್ಕೆ ರಾಜ್ಯಾದ್ಯಂತ ಚಿತ್ರಮಂದಿರ ಮತ್ತು ಮಲ್ಟಿಫ್ಲೆಕ್ಸ್​ಗಳಲ್ಲಿ ತೆರೆಕಾಣಲಿದೆ.

ಮೂಲತಃ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಕೃಷ್ಣ. ಎಲ್ ರಂಗಭೂಮಿಯೊಂದಿಗೆ ಒಡನಾಟ ಹೊಂದಿರುವವರು. ಇದೀಗ ಮೊದಲ ಬಾರಿಗೆ ಹಿರಿತೆರೆಗೆ ಆಗಮಿಸಿದ್ದಾರೆ. ನಿರ್ದೇಶನದ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ, ಸಸ್ಪೆನ್ಸ್ ಕಥಾಹಂದರವುಳ್ಳ ಈ ಚಿತ್ರದ ಬಹುತೇಕ ಚಿತ್ರೀಕರಣ ಭದ್ರಾವತಿಯಲ್ಲಿ ನಡೆದಿದೆ.

ಈಗಾಗಲೇ ಸಿನಿಮಾ ಸೇರಿ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಕರ್ಣ ರಾಮಚಂದ್ರ ಈ ಸಿನಿಮಾ ಮೂಲಕ ನಾಯಕರಾಗಿ ಪದಾರ್ಪಣೆ ಮಾಡಿದ್ದಾರೆ. ’ನಾನು ಹತ್ತು ವರ್ಷದ ಹಿಂದೆ ’ಫೆಬ್ರವರಿ 14‘ ಎಂಬ ಚಿತ್ರದಲ್ಲಿ ಅಭಿನಯಿಸಿದ್ದೆ. ಕಾರಣಾಂತರದಿಂದ ಈ ಚಿತ್ರ ಬಿಡುಗಡೆಯಾಗಲಿಲ್ಲ. ಆ ನಂತರ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ನನ್ನ ಅಭಿನಯದ ಧಾರಾವಾಹಿ ನೋಡಿದ ನಿರ್ದೇಶಕರು, ಈ ಚಿತ್ರದಲ್ಲಿ ನಾಯಕನ ಪಾತ್ರ ನೀಡಿದ್ದಾರೆ’ ಎಂಬುದು ಅವರ ಮಾತು.

ಎರಡನೇ ನಾಯಕನಾಗಿ ನಟಿಸಿರುವ ಹೇಮಂತ್ ಕುಮಾರ್ ಅವರಿಗೂ ಇದು ಮೊದಲ ಚಿತ್ರವಂತೆ. ಒಂದು ಹಾಡಿರುವ ಚಿತ್ರಕ್ಕೆ ಮುರಳೀಧರನ್ ಸಂಗೀತ ನೀಡಿದ್ದಾರೆ. ದಿವ್ಯ ರಾಮಚಂದ್ರ ಹಾಡಿದ್ದಾರೆ. ಮುರಳಿಧರನ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದ್ದು, ತಮ್ಮ ಅನುಭವವನ್ನೂ ಹಂಚಿಕೊಂಡರು. ಕಣ್ಣು ಪತ್ರಿಕೆ ಸಂಪಾದಕ ಶಿವಕುಮಾರ್ ನಾಗನವಿಲು, ನಟ ಪ್ರಶಾಂತ್ ಸಿದ್ದಿ, ಉದ್ಯಮಿ ಪ್ರದೀಪ್ ಕುಮಾರ್, ಶ್ರೀಮಂತ್ ಮಂಜು ಹಾಗೂ ನಿರ್ಮಲ ಮುಂತಾದವರು ಪತ್ರಿಕಾಗೋಷ್ಠಿಗೆ ಆಗಮಿಸಿ ಚಿತ್ರತಂಡಕ್ಕೆ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net