

Karur stampede : ಸೆಪ್ಟೆಂಬರ್ 27ರ ಶನಿವಾರ ಸಂಜೆ ತಮಿಳುನಾಡಿನ ಕರೂರಿನಲ್ಲಿ ತಮ್ಮ ಪಕ್ಷದ ಪ್ರಚಾರ ರ್ಯಾಲಿಯ ವೇಳೆ ಕಾಲ್ತುಳಿತ ಸಂಭವಿಸಿ 41 ಮಂದಿ ದುರಂತ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ತಮಿಳನ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ವಿಜಯ್ ಅವರು ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಕರೂರು ಕಾಲ್ತುಳಿತ ಘಟನೆ ನಡೆದ ಎರಡು ದಿನಗಳ ನಂತರ ಅಂದರೆ, ಮಂಗಳವಾರ (ಸೆ.30) ಸಂಜೆ ಮೊದಲ ವಿಡಿಯೋ ಸಂದೇಶವನ್ನು ಹಂಚಿಕೊಂಡಿರುವ ನಟ ವಿಜಯ್, ದುರಂತದ ಬಗ್ಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ನನ್ನ ಜೀವನದಲ್ಲಿ ಇಂತಹ ನೋವಿನ ಪರಿಸ್ಥಿತಿಯನ್ನು ನಾನು ಎಂದಿಗೂ ಎದುರಿಸಿಲ್ಲ. ನನ್ನ ದೇಹ ಮತ್ತು ಮನಸ್ಸು ಚಿಂತೆಯಿಂದ ತುಂಬಿ ಹೋಗಿದೆ. ನನ್ನ ಹೃದಯವು ಕೂಡ ನೋವಿನಲ್ಲಿ ಮುಳುಗಿ ಹೋಗಿದೆ ಎಂದು ವಿಜಯ್ ಅವರು ಹೇಳಿದ್ದಾರೆ.
ಪ್ರಚಾರದ ವೇಳೆ ನನ್ನನ್ನು ನೋಡಲು ಜನರು ಬಂದಿದ್ದರು. ಜನರು ನನ್ನ ಮೇಲೆ ಇಟ್ಟಿರುವ ಪ್ರೀತಿ ಮತ್ತು ವಾತ್ಸಲ್ಯಕ್ಕೆ ನಾನು ಸದಾ ಕೃತಜ್ಞನಾಗಿದ್ದೇನೆ. ಜನರ ಸುರಕ್ಷತೆ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದಲೇ ನಾನು ರಾಜಕೀಯವನ್ನು ಬದಿಗಿಟ್ಟು ಜನರಿಗೆ ಸುರಕ್ಷಿತವಾದ ಸ್ಥಳವನ್ನು ಆರಿಸಿಕೊಂಡು, ಭದ್ರತೆಗಾಗಿ ಪೊಲೀಸ್ ಇಲಾಖೆಯ ಬಳಿ ವಿನಂತಿಸಿ ಕೊಂಡಿದ್ದೆ. ಆದರೆ, ಏನಾಗಬಾರದಿತ್ತು ಅದು ಸಂಭವಿಸಿದೆ ಎಂದು ವಿಜಯ್ ನೋವಿನಿಂದ ಹೇಳಿಕೊಂಡಿದ್ದಾರೆ.
ದುರಂತದ ಬೆನ್ನಲ್ಲೇ ಸ್ಥಳದಿಂದ ಹೊರಟು ಹೋದರು ಮತ್ತು ಘಟನೆ ನಡೆದ ಬಳಿಕ ಜನರನ್ನು ನೋಡಲು ವಿಜಯ್ ಮತ್ತೆ ಬರಲಿಲ್ಲ ಎಂಬ ಆರೋಪಗಳಿಗೆ ಉತ್ತರ ನೀಡಿದ ವಿಜಯ್, ನಾನು ಕೂಡ ಒಬ್ಬ ಮನುಷ್ಯ. ಅಲ್ಲಿ ಅಷ್ಟೊಂದು ಜನರ ಮೇಲೆ ಪರಿಣಾಮ ಬೀರಿರುವ ಸಂದರ್ಭದಲ್ಲಿ, ನಾನು ಹೇಗೆ ಆ ಜನರನ್ನು ಬಿಟ್ಟು ಹಿಂತಿರುಗಲಿ? ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಕಾರಣಕ್ಕೆ ನಾನು ಮತ್ತೆ ಘಟನಾ ಸ್ಥಳಕ್ಕೆ ಹೋಗಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾವು ಐದು ಜಿಲ್ಲೆಗಳಲ್ಲಿ ಪ್ರಚಾರ ಮಾಡಿದ್ದೇವೆ. ಆದರೆ, ಕರೂರಿನಲ್ಲೇ ಇದು ಏಕೆ ಸಂಭವಿಸಿತು? ಮತ್ತು ಹೇಗೆ ಸಂಭವಿಸಿತು? ಈ ಬಗ್ಗೆ ಜನರಿಗೆ ಸತ್ಯ ತಿಳಿದಿದೆ ಮತ್ತು ಅವರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಸ್ಥಳೀಯ ಸಾಕ್ಷ್ಯವು ನಿಜವಾಗಿಯೂ ಏನಾಯಿತು ಎಂಬುದನ್ನು ಬಹಿರಂಗಪಡಿಸುತ್ತದೆ ಎಂದು ವಿಜಯ್ ಹೇಳಿದರು.
ಕರೂರಿನ ಜನರು ಸತ್ಯವನ್ನು ಹೇಳಿದಾಗ, ದೇವರೇ ನನ್ನ ಬಳಿಗೆ ಬಂದು ಅದನ್ನು ಬಹಿರಂಗಪಡಿಸಿದಂತೆ ಅನಿಸಿತು. ಶೀಘ್ರದಲ್ಲೇ, ಎಲ್ಲಾ ಸತ್ಯಗಳು ಬಹಿರಂಗಗೊಳ್ಳುತ್ತವೆ. ನಮಗೆ ಪೊಲೀಸರು ನೀಡಿದ ಸ್ಥಳದಿಂದಲೇ ನಾವು ಮಾತನಾಡಿದ್ದೇವೆ. ನಾವು ಯಾವುದೇ ತಪ್ಪು ಮಾಡಿಲ್ಲ. ಆದರೂ ಪಕ್ಷದ ನಾಯಕರು, ಸ್ನೇಹಿತರು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರನ್ನು ಎಫ್‌ಐಆರ್‌ಗಳಲ್ಲಿ ಹೆಸರಿಸಲಾಗುತ್ತಿದೆ ಎಂದು ವಿಜಯ್ ಆರೋಪ ಮಾಡಿದರು.
ಇದೇ ವೇಳೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ಗೆ ಮನವಿ ಮಾಡಿದ ವಿಜಯ್, ಮುಖ್ಯಮಂತ್ರಿ ಸರ್, ನೀವು ಸೇಡು ತೀರಿಸಿಕೊಳ್ಳುವ ಉದ್ದೇಶ ಹೊಂದಿದ್ದರೆ, ನನಗೆ ಏನು ಬೇಕಾದರೂ ಮಾಡಿ. ಆದರೆ, ನಮ್ಮ ಬೆಂಬಲಿಗರನ್ನು ಮುಟ್ಟಬೇಡಿ. ನಾನು ಮನೆಯಲ್ಲಿ ಅಥವಾ ನನ್ನ ಕಚೇರಿಯಲ್ಲಿ ಇರುತ್ತೇನೆ. ನೀವು ನನಗೆ ಏನು ಬೇಕಾದರೂ ಮಾಡಿ ಎಂದು ಹೇಳಿದರು. (ಏಜೆನ್ಸೀಸ್)