

ಕೌಲಾಲಂಪುರ: ಜಗತ್ತು ವ್ಯಾಪಾರದ ವಿಷಯಕ್ಕೆ ಬಂದಾಗ ಕಾಡಿನ ನಿಯಮಕ್ಕೆ ಮರಳಬಾರದು ಎಂದು ಚೀನಾದ(China) ಪ್ರಧಾನಿ ಲಿ ಕ್ವಿಯಾಂಗ್ ಹೇಳಿದ್ದಾರೆ. ಅಲ್ಲದೆ, ಅಮೆರಿಕದ ಏಕಪಕ್ಷೀಯತೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಕೌಲಾಲಂಪುರದಲ್ಲಿ ನಡೆದ ಪ್ರಾದೇಶಿಕ ಶೃಂಗಸಭೆಯಲ್ಲಿ ಮಾತನಾಡಿದ ಕ್ವಿಯಾಂಗ್, ಚೀನಾ ಸೇರಿದಂತೆ ಹಲವು ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್ ವಿಧಿಸಿರುವ ಸುಂಕಗಳನ್ನು ಉಲ್ಲೇಖಿಸಿ, ಆರ್ಥಿಕ ಜಾಗತೀಕರಣ ಮತ್ತು ಬಹುಧ್ರುವೀಯತೆಯನ್ನು ಬದಲಾಯಿಸಲಾಗದು ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಕ್ವಿಯಾಂಗ್, ಪ್ರಪಂಚವು ಕಾಡಿನ ಕಾನೂನಿಗೆ ಹಿಂತಿರುಗಬಾರದು. ಕಾಡಿನಲ್ಲಿ ಬಲಿಷ್ಠರು ದುರ್ಬಲರನ್ನು ಬೆದರಿಸುತ್ತಾರೆ ಎಂದಿದ್ದಾರೆ. ಅಲ್ಲದೆ, ಜಾಗತಿಕ ಮುಕ್ತ ವ್ಯಾಪಾರ ವ್ಯವಸ್ಥೆಗೆ ಬಲವಾದ ಬದ್ಧತೆಗೆ ಲಿ ಕರೆ ನೀಡಿದ್ದಾರೆ.
ಆಸಿಯಾನ್ ಶೃಂಗಸಭೆಯ ಹೊರತಾಗಿ ನಡೆದ ಸಭೆಯಲ್ಲಿ ಮಾತನಾಡಿದ ಲಿ, ಅಮೆರಿಕದ ಏಕಪಕ್ಷೀಯತೆ ಮತ್ತು ರಕ್ಷಣಾ ನೀತಿಯು ಅತಿರೇಕವಾಗುತ್ತಿದೆ. ಅಲ್ಲದೆ, ಈ ಪ್ರದೇಶಕ್ಕೆ ದೊಡ್ಡ ಅಪಾಯಗಳನ್ನು ಒಡ್ಡಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಮುಂದಿನ ದಿನಗಳಲ್ಲಿ ಟ್ರಂಪ್ ಮತ್ತು ಚೀನಾದ ಅಧ್ಯಕ್ಷ ಕ್ಸಿ, ಗುರುವಾರ ದಕ್ಷಿಣ ಕೊರಿಯಾದಲ್ಲಿ ಭೇಟಿಯಾಗಿ ತಮ್ಮ ನಡುವಿನ ವ್ಯಾಪಾರ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದಕ್ಕೆ ಬರಲು ಪ್ರಯತ್ನಿಸಲಿದ್ದಾರೆ. ಯುಎಸ್ನಲ್ಲಿ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಕ್ಸಿ ಮುಖಾಮುಖಿ ಮಾತುಕತೆ ನಡೆಸಲಿದ್ದಾರೆ.
ಟ್ರಂಪ್ ಮಲೇಷ್ಯಾಕ್ಕೆ ಆಗಮಿಸುವ ಮೊದಲು, ಬೆಸೆಂಟ್ ಮತ್ತು ಚೀನಾದ ಉಪಾಧ್ಯಕ್ಷ ಹೆ ಲಿಫೆಂಗ್ ಎರಡು ದಿನಗಳ ವ್ಯಾಪಾರ ಮಾತುಕತೆ ನಡೆಸಿ, ನವೆಂಬರ್ 1 ರಿಂದ ಜಾರಿಗೆ ಬರಲಿರುವ ಹೆಚ್ಚುವರಿ 100 ಪ್ರತಿಶತ ಸುಂಕಗಳನ್ನು ತಪ್ಪಿಸಲು ಒಪ್ಪಂದವನ್ನು ಕೋರಿದ್ದಾರೆ. ಬೀಜಿಂಗ್ ಮತ್ತು ವಾಷಿಂಗ್ಟನ್ ನಡುವೆ ಸಮಲೋಚನೆ ನಡೆಯುತ್ತಿದ್ದು ಚೌಕಟ್ಟನ್ನು ಒಪ್ಪಲಾಗಿದೆ ಎಂದು ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕದ ಅಧ್ಯಕ್ಷರು ತಮ್ಮ ಏಷ್ಯನ್ ಪ್ರವಾಸದ ಕೊನೆಯ ಹಂತದಲ್ಲಿ ಟೋಕಿಯೊಗೆ ಬಂದಿಳಿದರು. ಅಲ್ಲದೆ, ಮಾರ್ಗಮಧ್ಯೆ, ಗುರುವಾರ ಕ್ಸಿ ಅವರನ್ನು ಭೇಟಿಯಾದಾಗ ಒಪ್ಪಂದದ ಭರವಸೆ ಇದೆ ಎಂದು ಟ್ರಂಪ್ಹೇಳಿದರು. ನನಗೆ ಅಧ್ಯಕ್ಷ ಕ್ಸಿ ಬಗ್ಗೆ ತುಂಬಾ ಗೌರವವಿದೆ ಮತ್ತು ನಾವು ಒಂದು ಒಪ್ಪಂದದೊಂದಿಗೆ ಹೊರಬರಲಿದ್ದೇವೆ ಎಂದು ನಾನು ಭಾವಿಸುತ್ತೇನೆ" ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದರು. 2026 ರ ಮೊದಲ ಭಾಗದಲ್ಲಿ ಚೀನಾಕ್ಕೆ ಹೋಗುವ ಗುರಿಯನ್ನು ಹೊಂದಿರುವುದಾಗಿ ಹೇಳಿದರು. (ಏಜೆನ್ಸೀಸ್)