

ಇಸ್ತಾನ್‌ಬುಲ್: ಪಾಕಿಸ್ತಾನ(Pakistan) ಮತ್ತು ಅಫ್ಘಾನಿಸ್ತಾನ ನಡುವಿನ ಶಾಂತಿ ಮಾತುಕತೆಗಳು ಮೂರನೇ ದಿನದ ಕಾಲಿಟ್ಟಿದ್ದು, ಯಾವುದೇ ರಾಷ್ಟ್ರವು ಒಮ್ಮತಕ್ಕೆ ಬರಲು ವಿಫಲವಾಗಿವೆ. ಟರ್ಕಿ ಸರ್ಕಾರ ಆಯೋಜಿಸಿದ್ದ ಮತ್ತು ಕತಾರ್‌ನ ನೆರವಿನಲ್ಲಿ ನಡೆದ ಈ ಮಾತುಕತೆಗಳು ಕದನ ವಿರಾಮವನ್ನು ಕಾಪಾಡಿಕೊಳ್ಳುವ ಮೂಖ್ಯ ಉದ್ದೇಶ ಹೊಂದಿದೆ.
ಈ ಬಗ್ಗೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ಮುಖ್ಯ ವಕ್ತಾರ ಜಬಿಹುಲ್ಲಾ ಮುಜಾಹಿದ್ರನ್ನು ಉಲ್ಲೇಖಿಸಿ, ಇಸ್ತಾನ್‌ಬುಲ್‌ನಲ್ಲಿ ಮಾತುಕತೆ ಇನ್ನೂ ಮುಂದುವರೆದಿದ್ದು, ಇನ್ನೂ ಯಾವುದೇ ಫಲಿತಾಂಶಗಳನ್ನು ಘೋಷಿಸಲಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೆ, ಪಾಕ್ ಅಧಿಕಾರಿಗಳು ಸಹ ಮಾತುಕತೆ ನಡೆಯುತ್ತಿರುವುದನ್ನು ದೃಢಪಡಿಸಿದರು. ಅದರೆ, ಅಫ್ಘಾನ್ ನಿಯೋಗವು ಕಾಬೂಲ್‌ನಲ್ಲಿರುವ ಅಧಿಕಾರಿಗಳೊಂದಿಗೆ ಪದೇಪದೆ ಸಮಾಲೋಚನೆ ನಡೆಸುತ್ತಿದೆ ಮತ್ತು ಪಾಕಿಸ್ತಾನಕ್ಕೆ ಉತ್ತೇಜನಕಾರಿ ಪ್ರತಿಕ್ರಿಯೆ ದೊರೆತಿಲ್ಲ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಇಸ್ತಾನ್‌ಬುಲ್‌ನಲ್ಲಿ ನಿಯೋಗಗಳು ಮಾತುಕತೆ ನಡೆಸುತ್ತಿರುವಾಗ ಗಡಿಯಲ್ಲಿ ಎರಡು ಪ್ರಮುಖ ಒಳನುಸುಳುವಿಕೆ ಪ್ರಯತ್ನ ನಡೆಸುತ್ತಿದ್ದ 25 ಭಯೋತ್ಪಾದಕರನ್ನು ಕೊಂದಿರುವುದಾಗಿ ಪಾಕಿಸ್ತಾನ ಸೇನೆ ಭಾನುವಾರ ತಿಳಿಸಿದೆ. ಅಲ್ಲದೆ, ಗುಂಡಿನ ದಾಳಿಯಲ್ಲಿ ಐದು ಪಾಕಿಸ್ತಾನಿ ಸೈನಿಕರು ಸಹ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮಲೇಷ್ಯಾದಲ್ಲಿ ನಡೆದ ಆಸಿಯಾನ್ ಶೃಂಗಸಭೆಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎರಡು ನೆರೆಹೊರೆಯವರ ನಡುವಿನ ಬಿಕ್ಕಟ್ಟನ್ನು ಬಹುಬೇಗ ಪರಿಹರಿಸುವುದಾಗಿ ಪ್ರತಿಜ್ಞೆ ಮಾಡಿದ ಸ್ವಲ್ಪ ಸಮಯದ ನಂತರ ಇಸ್ಲಾಮಾಬಾದ್ ಮತ್ತು ಕಾಬೂಲ್ ನಡುವಿನ ನಡುವೆ ಮಾತುಕತೆಗಳು ನಡೆಯುತ್ತಿವೆ. ಅಲ್ಲದೆ, ಪಾಕ್ ಮತ್ತು ಅಫ್ಘಾನ್ ಶಾಂತಿ ಪ್ರಯತ್ನಗಳನ್ನು ಪ್ರಾರಂಭಿಸಿವೆ.
ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಗಾರರು ಭಯೋತ್ಪಾದಕರು ಗಡಿ ದಾಟಲು ಮತ್ತು ಅಫ್ಘಾನ್ ನೆಲವನ್ನು ಬಳಸಿಕೊಂಡು ದಾಳಿ ನಡೆಸಲು ಅವಕಾಶ ನೀಡುತ್ತಿದ್ದಾರೆ ಎಂದು ಪಾಕಿಸ್ತಾನ ಆರೋಪಿಸಿದೆ. ಆದರೆ ಕಾಬೂಲ್ ಈ ಆರೋಪವನ್ನು ನಿರಾಕರಿಸಿದೆ.
ಗಡಿ ಘರ್ಷಣೆಗಳ ನಂತರ ಕತಾರ್ ಮೊದಲ ಸುತ್ತಿನ ಮಾತುಕತೆಯನ್ನು ಆಯೋಜಿಸಿದ ನಂತರ ಅಕ್ಟೋಬರ್ 19 ರಂದು ಎರಡೂ ದೇಶಗಳು ಕದನ ವಿರಾಮ ಒಪ್ಪಂದಕ್ಕೆ ಬಂದವು.
ಇಸ್ಲಾಮಾಬಾದ್‌ನ ಇಬ್ಬರು ಪಾಕಿಸ್ತಾನಿ ಭದ್ರತಾ ಅಧಿಕಾರಿಗಳು, ಪಾಕಿಸ್ತಾನ ತನ್ನ ಅಂತಿಮ ನಿಲುವನ್ನು ಅಫ್ಘಾನ್ ತಾಲಿಬಾನ್ ಪ್ರತಿನಿಧಿಗಳಿಗೆ ತಿಳಿಸಿದ್ದು, ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದರು. 2021 ರಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡಾಗಿನಿಂದ ಗಡಿಯಾಚೆಗಿನ ದಾಳಿಯಲ್ಲಿ ನಿಷೇಧಿತ ಪಾಕಿಸ್ತಾನಿ ತಾಲಿಬಾನ್ (ಟಿಟಿಪಿ) ವಿರುದ್ಧ ಕಾಬೂಲ್ ನಿಖರ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಪಾಕಿಸ್ತಾನ ನಿರೀಕ್ಷಿಸುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಆತಿಥೇಯ ರಾಷ್ಟ್ರವಾಗಿ ಟರ್ಕಿ ಮಾತುಕತೆಗಳನ್ನು ರಚನಾತ್ಮಕ ಮತ್ತು ಉದ್ದೇಶಪೂರ್ವಕವಾಗಿಡಲು ಪ್ರಯತ್ನಿಸುತ್ತಿದೆ. ಅಫ್ಘಾನ್ ನೆಲದಿಂದ ಪಾಕಿಸ್ತಾನಿ ತಾಲಿಬಾನ್ ನಡೆಸಿದ ಗಡಿಯಾಚೆಗಿನ ದಾಳಿಗಳ ಬಗ್ಗೆ ಪಾಕಿಸ್ತಾನವು ಅಫ್ಘಾನ್ ಕಡೆಯೊಂದಿಗೆ ಬಲವಾದ ಪುರಾವೆಗಳನ್ನು ಹಂಚಿಕೊಂಡಿದೆ ಎಂದು ಹೇಳಿದೆ.
ಪಾಕಿಸ್ತಾನಿ ನಿಯೋಗದ ನಿಲುವು ತರ್ಕಬದ್ಧವಾಗಿದ್ದು, ದೃಢ ಮತ್ತು ಶಾಂತಿಗೆ ಅತ್ಯಗತ್ಯವಾಗಿದೆ ಎಂದಿದ್ದಾರೆ. ಪಾಕಿಸ್ತಾನ ಮಂಡಿಸಿದ ಬೇಡಿಕೆಗಳು ನ್ಯಾಯಯುತ ಮತ್ತು ಸಮಂಜಸವಾಗಿವೆ. ಆತಿಥೇಯ ರಾಷ್ಟ್ರಗಳು ಸಹ ಪಾಕಿಸ್ತಾನದ ನಿಲುವು ಸರಿಯಾಗಿದೆ ಎಂದು ಒಪ್ಪಿಕೊಂಡಿವೆ ಎಂದು ಹೇಳಿದರು. (ಏಜೆನ್ಸೀಸ್)