

Trump: ಇಸ್ರೇಲ್-ಇರಾನ್ ನಡುವಿನ ಸಂಘರ್ಷದ ಕಿಚ್ಚನ್ನು ಹೆಚ್ಚಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಎರಡೂ ದೇಶಗಳ ನಡುವೆ ಕದನ ವಿರಾಮ ತರುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದು ಅಚ್ಚರಿ ಬೆಳವಣಿಗೆಯೇ. ಇದೆಲ್ಲದರ ಮಧ್ಯೆ ಚೀನಾ ದೇಶದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಟ್ರಂಪ್, ಶೀಘ್ರದಲ್ಲೇ ಭಾರತದೊಂದಿಗೆ ಬಹಳ ದೊಡ್ಡ ಒಪ್ಪಂದವೊಂದನ್ನು ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ಇದರೊಂದಿಗೆ, ಟ್ರಂಪ್ ಭಾರತದೊಂದಿಗೆ ಯಾವ ರೀತಿಯ ಒಪ್ಪಂದಕ್ಕೆ ಸಹಿ ಹಾಕುತ್ತಾರೆ ಎಂಬ ಕುತೂಹಲ ಭಾರತೀಯರು ಮತ್ತು ರಾಜಕೀಯ ವಲಯದಲ್ಲಿ ಮೂಡಿದೆ. ಇತ್ತೀಚೆಗೆ ಬಿಗ್ ಬ್ಯೂಟಿಫುಲ್ ಬಿಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, "ಎಲ್ಲರೂ ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಲು ಎದುರುನೋಡುತ್ತಿದ್ದಾರೆ. ನಾವು ಇತ್ತೀಚೆಗಷ್ಟೇ ಚೀನಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಇದರೊಂದಿಗೆ ಇನ್ನೂ ಕೆಲವು ಉತ್ತಮ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಶೀಘ್ರದಲ್ಲೇ ಭಾರತದೊಂದಿಗೆ ಬಿಗ್ ಡೀಲ್ ಮಾಡಿಕೊಳ್ಳಲಿದ್ದೇವೆ" ಎಂದು ಹೇಳಿದ್ದಾರೆ.
"ಭಾರತದ ಜೊತೆಗೆ ನಾವು ಮಾಡಿಕೊಳ್ಳುವ ಆ ಒಪ್ಪಂದ ಬಹಳ ದೊಡ್ಡದಾಗಿರಲಿದೆ. ಭಾರತದಲ್ಲಿ ಮಾರುಕಟ್ಟೆಗಳನ್ನು ತೆರೆಯಲಿದ್ದೇವೆ. ಅದೇ ಸಮಯದಲ್ಲಿ, ಕೆಲವು ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅಮೆರಿಕ ಸಿದ್ಧವಿಲ್ಲ. ಅವರೊಂದಿಗೆ ಯಾವುದೇ ವ್ಯಾಪಾರ-ವಹಿವಾಟು ನಡೆಸಲು ನಮಗೆ ಇಷ್ಟವಿಲ್ಲ. ಒಂದಷ್ಟು ದೇಶಗಳಿಗೆ ಪತ್ರವನ್ನು ಕಳುಹಿಸಿ, 35ರಿಂದ 45 ಪ್ರತಿಶತ ತೆರಿಗೆಗಳನ್ನು ಪಾವತಿಸಲು ಹೇಳುತ್ತೇವೆ. ಅದು ಸುಲಭ ಮಾರ್ಗ" ಎಂದು ಟ್ರಂಪ್ ಹೇಳಿದರು.
ಆದಾಗ್ಯೂ, ಚೀನಾದೊಂದಿಗೆ ಯಾವ ರೀತಿಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂಬುದನ್ನು ಟ್ರಂಪ್ ಇಲ್ಲಿಯವರೆಗೆ ಬಹಿರಂಗಪಡಿಸಿಲ್ಲ. ಸದ್ಯ ಇದೇ ಹಲವರ ಕುತೂಹಲ ಮತ್ತು ಅಚ್ಚರಿಗೆ ಕಾರಣವಾಗಿದೆ,(ಏಜೆನ್ಸೀಸ್).