Trump Reposts Modi Post | ಗಾಜಾ ಸಂಘರ್ಷ; ಪ್ರಧಾನಿ ಮೋದಿ ಪೋಸ್ಟ್​​ ರೀಟ್ವೀಟ್​​ ಮಾಡಿದ ಟ್ರಂಪ್​​!

PM Modi meets Donald Trump
Published on

Trump Reposts Modi Post: ಗಾಜಾ ಸಂಘರ್ಷವನ್ನು ಕೊನೆಗೊಳಿಸುವ ತಮ್ಮ ನಿಲುವಿಗೆ ಬೆಂಬಲ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಸಂದೇಶವನ್ನು, ತಮ್ಮ ಯಾವುದೇ ಪದಗಳನ್ನು ಸೇರಿಸದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೀಟ್ವೀಟ್​​ ಮಾಡಿದ್ದಾರೆ.

ಗಾಜಾ ಸಂಘರ್ಷವನ್ನು ಕೊನೆಗೊಳಿಸಲು ಸಮಗ್ರ ಯೋಜನೆಯನ್ನು ರೂಪಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಣೆಯನ್ನು ಭಾರತ ಸ್ವಾಗತಿಸುತ್ತದೆ, ಈ ನೀಲನಕ್ಷೆಯು ಪ್ಯಾಲೆಸ್ಟೀನಿಯನ್ ಮತ್ತು ಇಸ್ರೇಲಿ ಜನರಿಗೆ ಹಾಗೂ ವಿಶಾಲ ಪಶ್ಚಿಮ ಏಷ್ಯಾ ಪ್ರದೇಶಕ್ಕೆ ದೀರ್ಘಾವಧಿಯ ಮತ್ತು ಸುಸ್ಥಿರ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಗೆ ಒಂದು ಕಾರ್ಯಸಾಧ್ಯವಾದ ಮಾರ್ಗವನ್ನು ನೀಡುತ್ತದೆ ಎಂದು ಮೋದಿ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಟ್ರಂಪ್ ಉಪಕ್ರಮವನ್ನು ಎಲ್ಲರೂ ಬೆಂಬಲಿಸುತ್ತಾರೆ ಎಂಬ ಭರವಸೆಯನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದು, ಇದು ವಿಶ್ವದ ಅತ್ಯಂತ ಕಠಿಣ ಸಂಘರ್ಷವೊಂದರ ಮಧ್ಯಸ್ಥಿಕೆ ವಹಿಸುವ ಅಮೆರಿಕಾ ಪ್ರಯತ್ನಕ್ಕೆ ಭಾರತದ ಅನುಮೋದನೆಯನ್ನು ಸೂಚಿಸುತ್ತದೆ. ಮಧ್ಯಪ್ರಾಚ್ಯದ ಹಿಂಸಾಚಾರದ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಟ್ರಂಪ್ ಸರ್ಕಾರ ದಿಟ್ಟ ಹೆಜ್ಜೆ ಎಂದು ಹೇಳಲಾಗುತ್ತಿದೆ.

ಟ್ರಂಪ್‌ರ ಗಾಜಾ ಯೋಜನೆ

ಗಾಜಾ ಸಂಘರ್ಷವನ್ನು ಕೊನೆಗೊಳಿಸುವ ಗುರಿ ಇಟ್ಟುಕೊಂಡಿರುವ ಅಮೆರಿಕಾ 20 ಅಂಶಗಳ ಯೋಜನೆಯನ್ನು ಸೋಮವಾರ ಜಾರಿಗೆ ತಂದಿದೆ. ಇದರಲ್ಲಿ ತಕ್ಷಣದ ಕದನ ವಿರಾಮ, ಒತ್ತೆಯಾಳು-ಕೈದಿಗಳ ವಿನಿಮಯ, ಇಸ್ರೇಲಿ ಹಂತಹಂತವಾಗಿ ಹಿಂತೆಗೆದುಕೊಳ್ಳುವಿಕೆ, ಹಮಾಸ್ ನಿಶ್ಯಸ್ತ್ರೀಕರಣ ಮತ್ತು ಅಂತರರಾಷ್ಟ್ರೀಯ ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಪರಿವರ್ತನಾ ಸರ್ಕಾರ ರಚನೆಗೆ ಕರೆ ನೀಡಲಾಗಿದೆ. ಓವಲ್ ಕಚೇರಿಯಲ್ಲಿ ನಡೆದ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವಿನ ಸಭೆಯ ನಂತರ ಈ ಪ್ರಸ್ತಾಪವನ್ನು ಬಹಿರಂಗಪಡಿಸಲಾಯಿತು, ನೆತನ್ಯಾಹು ಪಕ್ಕದಲ್ಲಿ ನಿಂತುಕೊಂಡ ಟ್ರಂಪ್ ತಮ್ಮ ಆಶಾವಾದ ವ್ಯಕ್ತಪಡಿಸಿದರು.

ಅರಬ್​​​ ಸೇರಿದಂತೆ ಮುಸ್ಲಿಂ ರಾಷ್ಟ್ರಗಳು ಈ ಪ್ರಸ್ತಾಪವನ್ನು ಸ್ವಾಗತಿಸಿದ್ದು, ಆದರೆ, ಹಮಾಸ್ ಆ ಎಲ್ಲ ನಿಯಮಗಳನ್ನು ಪರಿಶೀಲಿಸುತ್ತಿರುವುದರಿಂದ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ. ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸುವ ತನ್ನ ಯೋಜನೆಯನ್ನು ಒಪ್ಪಿಕೊಳ್ಳಲು ಹಮಾಸ್‌ಗೆ ಟ್ರಂಪ್​​ ಮೂರ್ನಾಲ್ಕು ದಿನಗಳ ಗಡುವು ನೀಡಿದ್ದಾರೆ ಎಂದು ವರದಿಯಾಗಿದೆ. ಹಮಾಸ್ ಸಮಾಲೋಚನೆಗಳನ್ನು ಪ್ರಾರಂಭಿಸಿದ್ದು, ಇದರಲ್ಲಿನ ಕೆಲವು ಗೊಂದಲಗಳಿಂದ ಚರ್ಚೆಗಳು ಕೆಲ ದಿನಗಳನ್ನು ತೆಗೆದುಕೊಳ್ಳಬಹುದು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪ್ಯಾಲೇಸ್ಟಿನಿಯನ್ ಮೂಲವೊಂದು ತಿಳಿಸಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net