

Trump Tariffs: ಉಕ್ರೇನ್ನಲ್ಲಿನ ಯುದ್ಧವನ್ನು ಕೊನೆಗೊಳಿಸಲು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿ ಕಠಿಣ ಕ್ರಮಗಳನ್ನು ಹೇರುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ (ಸೆ 13) ನ್ಯಾಟೋ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.
ನ್ಯಾಟೋ ಸದಸ್ಯರನ್ನು ಉದ್ದೇಶಿಸಿ ಪತ್ರ ಬರೆದಿರುವ ಟ್ರಂಪ್, ಎಲ್ಲಾ ನ್ಯಾಟೋ ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿದಾಗ ಆ ದೇಶದ ಮೇಲೆ ಪ್ರಮುಖ ನಿರ್ಬಂಧಗಳನ್ನು ವಿಧಿಸಲು ನಾನು ಸಿದ್ಧನಿದ್ದೇನೆ. ನ್ಯಾಟೋದ ಬದ್ಧತೆಯು ಶೇಕಡಾ 100 ಕ್ಕಿಂತ ಕಡಿಮೆಯಾಗಿದೆ ಮತ್ತು ರಷ್ಯಾದ ತೈಲವನ್ನು ಕೆಲವರು ಖರೀದಿಸುವುದು ಆಘಾತಕಾರಿಯಾಗಿದೆ ಎಂದರು.
ನ್ಯಾಟೋ ನಾನು ಹೇಳಿದಂತೆ ಕೇಳಿದರೆ ಯುದ್ಧ ಬೇಗನೆ ಕೊನೆಗೊಳ್ಳುತ್ತದೆ, ಜೀವಗಳು ಉಳಿಯುತ್ತವೆ, ಇಲ್ಲದಿದ್ದರೆ ನೀವು ನನ್ನ ಸಮಯ, ಮತ್ತು ಯುನೈಟೆಡ್ ಸ್ಟೇಟ್ಸ್ನ ಸಮಯ, ಶಕ್ತಿ ಮತ್ತು ಹಣವನ್ನು ವ್ಯರ್ಥ ಮಾಡಿದಂತಾಗುತ್ತದೆ ಎಂದರು. ಬ್ರಿಟನ್ ಶುಕ್ರವಾರ ರಷ್ಯಾ ಸಂಬಂಧಿತ ನಿರ್ಬಂಧಗಳ ಹೊಸ ಪ್ಯಾಕೇಜ್ ಅನ್ನು ಪ್ರಾರಂಭಿಸಿದ್ದು, ರಷ್ಯಾದ ತೈಲವನ್ನು ಸಾಗಿಸುವ ಹಡಗುಗಳು ಹಾಗೂ ರಷ್ಯಾದ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬಳಸುವ ಎಲೆಕ್ಟ್ರಾನಿಕ್ಸ್, ರಾಸಾಯನಿಕಗಳು ಮತ್ತು ಸ್ಫೋಟಕಗಳನ್ನು ಪೂರೈಸುವ ಕಂಪನಿಗಳು ಮತ್ತು ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿತು.
ಭಾರತ ರಷ್ಯಾದ ತೈಲವನ್ನು ನಿರಂತರವಾಗಿ ಆಮದು ಮಾಡಿಕೊಳ್ಳುತ್ತಿರುವುದರಿಂದ ಇಲ್ಲಿನ ಸರಕುಗಳ ಮೇಲೆ ಟ್ರಂಪ್ ಹೆಚ್ಚುವರಿಯಾಗಿ ಶೇಕಡಾ 25 ರಷ್ಟು ಸುಂಕವನ್ನು ವಿಧಿಸಿದ ನಂತರ ಈ ಹೇಳಿಕೆಗಳು ಹೊರಬಿದ್ದಿದ್ದು, ಯುದ್ಧವನ್ನು ಕೊನೆಗೊಳಿಸುವಲ್ಲಿ ಯಾವುದೇ ಪ್ರಗತಿ ಸಾಧಿಸದಿದ್ದರೆ, ಚೀನಾ ಮತ್ತು ಭಾರತ ಸೇರಿದಂತೆ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವ ದೇಶಗಳ ಮೇಲೆ ನಿರ್ಬಂಧಗಳನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ.(ಏಜೆನ್ಸೀಸ್)