ಅಮೆರಿಕಕ್ಕೆ ಮಾತ್ರ ಆ್ಯಪಲ್​!? ನೀವು ಎಷ್ಟು ಹೂಡಿಕೆ ಮಾಡ್ತೀರಾ? ಟಿಮ್​ ಕುಕ್​ಗೆ ಟ್ರಂಪ್​ ಪ್ರಶ್ನೆ | Donald Trump

ವಿಜಯವಾಣಿ (24)
Published on

Donald Trump: ಪ್ರಸ್ತುತ, ರಷ್ಯಾ ವಿರುದ್ಧದ ಕೋಪವನ್ನು ಭಾರತದ ಮೇಲೆ 'ಸುಂಕಾಸ್ತ್ರ'ದ ಮೂಲಕ ತೀರಿಸಿಕೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗೂಗಲ್​, ಆ್ಯಪಲ್​, ಮೆಟಾ ಸಂಸ್ಥೆಗಳ ಸಿಇಒಗಳೊಂದಿಗೆ ಉನ್ನತ ಔತಣಕೂಟ ನಡೆಸಿದ್ದಾರೆ.

ಅಮೆರಿಕದ ಶ್ವೇತಭವನದಲ್ಲಿ ಸಿಲಿಕಾನ್ ವ್ಯಾಲಿಯ ಗಣ್ಯರೊಂದಿಗೆ ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ, ಟ್ರಂಪ್, ಆ್ಯಪಲ್ ಸಿಇಒ ಟಿಮ್ ಕುಕ್, ಮೆಟಾ ಸಂಸ್ಥೆಯ ಮಾರ್ಕ್ ಝುಕರ್​ಬರ್ಗ್​, ಓಪನ್​ಎಐ ಸಿಇಒ ಸ್ಯಾಮ್​ ಆಲ್ಟ್​ಮ್ಯಾನ್​, ಗೂಗಲ್ ಸಿಇಒ ಸುಂದರ್ ಪಿಚೈ ಸೇರಿದಂತೆ ಇನ್ನು ಹಲವರೊಂದಿಗೆ ಹೂಡಿಕೆ ಕುರಿತಂತೆ ಚರ್ಚೆ ನಡೆಸಿದರು. ಭಾರತದಲ್ಲಿ ತನ್ನ ಸಂಸ್ಥೆಯ ಬೆಳವಣಿಗೆಯನ್ನು ವಿಸ್ತರಿಸುತ್ತಿರುವ ಕುಕ್​ಗೆ ಪರೋಕ್ಷವಾಗಿ ಚಾಟಿ ಬೀಸಿದ ಟ್ರಂಪ್​, ಅಮೆರಿಕದಲ್ಲಿ ಎಷ್ಟು ಹೂಡಿಕೆ ಮಾಡತ್ತೀರಿ? ಎಂದು ಪ್ರಶ್ನಿಸಿದರು.

ಮಾತುಕತೆಯ ವೇಳೆ ಟಿಮ್​ ಕುಕ್​ಗೆ ಪ್ರಶ್ನಿಸಿದ ಟ್ರಂಪ್​, "ಅಮೆರಿಕದಲ್ಲಿ ನೀವು ಎಷ್ಟು ಹೂಡಿಕೆ ಮಾಡುತ್ತೀರಿ. ನನಗೆ ಗೊತ್ತು ಅದೊಂದು ದೊಡ್ಡ ಮೊತ್ತದ ಹಣ ಎಂದು. ಈ ಮೊದಲು ಬೇರೆಡೆ ಎಲ್ಲೋ ಇದ್ರಿ. ಈಗ ತವರಿಗೆ ದೊಡ್ಡದಾಗಿ ಕಮ್​ಬ್ಯಾಕ್​ ಮಾಡುತ್ತಿದ್ದೀರಿ. ಸರಿ, ಈಗ ಎಷ್ಟು ಹೂಡಿಕೆ ಮಾಡಲು ಬಯಸುತ್ತೀರಿ ಹೇಳಿ" ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕುಕ್​, "600 ಬಿಲಿಯನ್​ ಡಾಲರ್"​ ಎಂದರು.

ಭಾರತದಲ್ಲಿ ಆ್ಯಪಲ್​ ಪ್ಲ್ಯಾನ್ಸ್​

ಕಳೆದ ಮೇ ತಿಂಗಳಲ್ಲಿ, ಟ್ರಂಪ್ ಟಿಮ್ ಕುಕ್‌ಗೆ ಆ್ಯಪಲ್ ತನ್ನ ಉತ್ಪನ್ನಗಳನ್ನು ಭಾರತದಲ್ಲಿ ನಿರ್ಮಿಸುವುದನ್ನು ಬಯಸುವುದಿಲ್ಲ ಎಂದು ಖಡಕ್​ ಆಗಿ ಹೇಳಿದ್ದರು. ಚೀನಾದಿಂದ ಉತ್ಪಾದನೆಯನ್ನು ವೈವಿಧ್ಯಗೊಳಿಸುವ ಟೆಕ್​ ದೈತ್ಯ ಕಂಪನಿಯ ನಡೆಯನ್ನು ಟ್ರಂಪ್​ ಕಿಂಚಿತ್ತು ಒಪ್ಪಲಿಲ್ಲ. ಬದಲಿಗೆ ಟೀಕಿಸಿದ್ದರು. ಆದರೂ ಸಹ ಕುಕ್​, ಭಾರತದಲ್ಲಿ ತಮ್ಮ ಹೂಡಿಕೆಯನ್ನು ಮುಂದುವರೆಸಿದ್ದಾರೆ.

ಆಗಸ್ಟ್‌ನಲ್ಲಿ ಸ್ಪಷ್ಟಪಡಿಸಿದ ಆ್ಯಪಲ್, ಭಾರತದಲ್ಲಿ ತನ್ನ ವಿಸ್ತರಣೆಯನ್ನು ಮಂದಗತಿಗೊಳಿಸುವ ಉದ್ದೇಶವಿಲ್ಲ ಎಂದು ಭಾರತ ಸರ್ಕಾರಕ್ಕೆ ತಿಳಿಸಿತು. 'ಟೈಮ್ಸ್ ಆಫ್ ಇಂಡಿಯಾ' ವರದಿಯ ಪ್ರಕಾರ, ಟೆಕ್ ದೈತ್ಯ ಕಂಪನಿಯು ಐಫೋನ್ ಉತ್ಪಾದನಾ ಸಾಮರ್ಥ್ಯವನ್ನು ವಾರ್ಷಿಕವಾಗಿ 40 ಮಿಲಿಯನ್ ಯುನಿಟ್‌ಗಳಿಂದ ಸುಮಾರು 60 ಮಿಲಿಯನ್‌ಗೆ ಹೆಚ್ಚಿಸಲು ಭಾರತದಲ್ಲಿ ಅಂದಾಜು 2.5 ಬಿಲಿಯನ್ ಡಾಲರ್‌ಗಳನ್ನು ನೀಡಲು ಮುಂದಾಗಿರುವುದು ಗಮನಾರ್ಹ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net