

ವಿಜಯವಾಣಿ ಸುದ್ದಿಜಾಲ ಕೋಟ
ಕಾವಡಿ ಗ್ರಾಮದಲ್ಲಿ ಶೇ.90 ಕೃಷಿಕ ಹಾಗೂ ಹೈನುಗಾರಿಕೆ ಚಟುವಟಿಕೆಗಳೇ ಇದ್ದು, ಗ್ರಾಮದಲ್ಲಿ ಮಲತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದಿಂದ ತೊಂದರೆಯಾಗುತ್ತದೆ ಎಂದು ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿ ಪ್ರಮುಖರಾದ ಉದಯಶ್ಚಂದ್ರ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು.
ವಡ್ಡರ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವಡಿ ಗ್ರಾಮದಲ್ಲಿ ಮಲ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ವಿರುದ್ಧ ಕಾವಡಿ ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಕಾವಡಿ ಪ್ರದೇಶ ಜನನಿಬೀಡವಾಗಿದ್ದು, ಘಟಕ ನಿರ್ಮಾಣದಿಂದ ಕುಡಿಯುವ ನೀರು ಕಲುಷಿತಗೊಳ್ಳಲಿದೆ. ಜತೆಗೆ ಮಲೇರಿಯಾ, ಡೆಂಘಿಯಂತಹ ಮಾರಕ ಕಾಯಿಲೆಗಳ ಭೀತಿಯೂ ಎದುರಾಗಲಿದೆ. ಘಟಕ ನಿರ್ಮಾಣಗೊಂಡಲ್ಲಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ವಡ್ಡರ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ್ ಕಾಂಚನ್, ಸದಸ್ಯರಾದ ಉದಯ್ ಕುಲಾಲ್, ರೇಖಾ ಶರತ್ ಶೆಟ್ಟಿ, ಕುಶಲ ಶೆಟ್ಟಿ, ಮಾಜಿ ತಾ.ಪಂ. ಸದಸ್ಯ ಉಲ್ಲಾಸ್ ಶೆಟ್ಟಿ, ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿಯ ಪ್ರಮುಖರಾದ ಗೋಪಾಲಕೃಷ್ಣ ಕಾಂಚನ್, ಅಣ್ಣಪ್ಪ ಪೂಜಾರಿ ,ರಮೇಶ್ ರಾವ್, ಚಂದ್ರಶೇಖರ್ ಶೆಟ್ಟಿ, ಪ್ರಭಾಕರ್ ಶೆಟ್ಟಿ, ವಿಜಯಕುಮಾರ್ ಶೆಟ್ಟಿ, ಶರತ್ ಶೆಟ್ಟಿ, ಗುರುರಾಜ್ ಕಾಂಚನ್, ಜೀವನ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ತಹಸೀಲ್ದಾರ್ ಶ್ರೀಕಾಂತ್ ಎಸ್.ಹೆಗ್ಡೆಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ತಹಸೀಲ್ದಾರರು, ಘಟಕದ ಸ್ಥಳ ಈಗಾಗಲೆ ಪರಿಶೀಲನೆ ಪೂರ್ಣಗೊಂಡಿದೆ. ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರು.
ಮಲತ್ಯಾಜ್ಯ ಘಟಕ ನಿರ್ಮಾಣದ ಬಗ್ಗೆ ಈವರೆಗೆ ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡಿಲ್ಲ. ಜನರ ಭಾವನೆಗಳ ಜತೆ ಚೆಲ್ಲಾಟವಾಡಬಾರದು. ಇಲ್ಲಿ ಘಟಕ ನಿರ್ಮಾಣ ಆರಂಭಿಸಿದರೆ ಉಗ್ರ ರೀತಿಯಲ್ಲಿ ಹೋರಾಟ ಮಾಡಲಾಗುವುದು.