ಚಿನ್ನ ತಂದು ಕೊಡದ ಪತ್ನಿಗೆ ತ್ರಿವಳಿ ತಲಾಖ್

talaq
Published on

ಕಾಸರಗೋಡು: ಹೆಚ್ಚುವರಿ ಚಿನ್ನಾಭರಣಕ್ಕಾಗಿ ಪತ್ನಿಗೆ ಕಿರುಕುಳ ನೀಡಿರುವುದಲ್ಲದೆ, ತವರಿಂದ ಚಿನ್ನ ತಂದುಕೊಡದ ಹಿನ್ನೆಲೆಯಲ್ಲಿ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಬೆಳಿಂಜದ ಬಾಡಿಗೆ ಮನೆಯ ನಿವಾಸಿ ಇಬ್ರಾಹಿಂ ಬಾದುಷಾ ಎಂಬಾತನ ವಿರುದ್ಧ ದೇಲಂಪಾಡಿ ನಿವಾಸಿ ರಾಶಿದಾ(23) ಎಂಬುವರು ನೀಡಿದ ದೂರಿನನ್ವಯ ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 2018ರ ಮೇ 18ರಂದು ರಾಶಿದಾ ಇಬ್ರಾಹಿಂ ಬಾದುಷಾ ವಿವಾಹ ನಡೆದಿದ್ದು, ನಂತರ ಪುತ್ತೂರು ಕಾವು ಎಂಬಲ್ಲಿ ದಂಪತಿ ವಾಸಿಸುತ್ತಿದ್ದರು. ವಿವಾಹ ಸಂದರ್ಭ ವರದಕ್ಷಿಣೆ ರೂಪದಲ್ಲಿ ಎಂಟು ಪವನ್ ಚಿನ್ನ ನೀಡಲಾಗಿದ್ದು, ನಂತರ ತವರಿಂದ ಹೆಚ್ಚಿನ ಚಿನ್ನ ತಂದುಕೊಡುವಂತೆ ಪತಿ ಇಬ್ರಾಹಿಂ ಬಾದುಷಾ ನಿರಂತರ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದನು. ನಂತರ ಇಬ್ರಾಹಿಂ ಬಾದುಷಾ ಬೆಳಿಂಜದ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದಾನೆ. ಅಲ್ಲೂ ಕಿರುಕುಳ ಮುಂದುವರಿಸಿದ್ದು, ಆ.7ರಂದು ತನ್ನ ಮೇಲೆ ಹಲ್ಲೆಗೈದು, ತ್ರಿವಳಿ ತಲಾಖ್ ಮೂಲಕ ವಿವಾಹ ಸಂಬಂಧ ಕೊನೆಗೊಳಿಸಿ ತೆರಳಿರುವುದಾಗಿ ರಾಶಿದಾ ದೂರಿನಲ್ಲಿ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net