ಹುಂಡಿಗೆ ಕಾಸು ಹಾಕಬೇಡಿ, ಉಲ್ಟಾ ದುಡ್ಡು ತಗೊಳ್ಳಿ: ಈ ವೈರಲ್​ ದೇವಸ್ಥಾನದ ಅಸಲಿ ಕಥೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ! Viral Video

ಬಾಯಲ್ಲಿ ಬಿಡಿ ಹಚ್ಚಿ, ಕಾಸನ್ನು ಹಂಚುತ್ತಿರುವ ದೃಶ್ಯ
ಬಾಯಲ್ಲಿ ಬಿಡಿ ಹಚ್ಚಿ, ಕಾಸನ್ನು ಹಂಚುತ್ತಿರುವ ದೃಶ್ಯ
Published on
ವೈರಲ್: ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಚಿತ್ರ ವಿಡಿಯೋ (Viral Video) ಗಳು ಹರಿದಾಡುತ್ತಲೇ ಇರುತ್ತವೆ. ಆದರೆ, ಇತ್ತೀಚೆಗೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ವೈರಲ್ ಆಗಿರೋ ಒಂದು ವಿಡಿಯೋ ಮಾತ್ರ ನೆಟ್ಟಿಗರ ನಿದ್ದೆ ಗೆಡಿಸಿದೆ.
ಸಾಮಾನ್ಯವಾಗಿ ನಾವು ದೇವಸ್ಥಾನಕ್ಕೆ ಹೋದಾಗ ಹುಂಡಿಗೆ ಕಾಣಿಕೆ ಹಾಕ್ತೀವಿ, ಅಥವಾ ಅರ್ಚಕರ ತಟ್ಟೆಯಲ್ಲಿ ಕಾಸು ಕೊಡ್ತೀವಿ. ಆದ್ರೆ ಈ ದೇವಸ್ಥಾನದಲ್ಲಿ ಭಕ್ತರಿಂದ ಕಾಣಿಕೆ ಪಡೆಯುವ ಬದಲು, ಅರ್ಚಕರೇ ಸಾಲಿನಲ್ಲಿ ನಿಂತ ಭಕ್ತರಿಗೆ ಪ್ರಸಾದದ ರೂಪದಲ್ಲಿ ನಾಣ್ಯಗಳನ್ನು ಹಸ್ತಾಂತರಿಸುತ್ತಿದ್ದಾರೆ.
ತಮಿಳುನಾಡಿನ ದೇವಸ್ಥಾನವೊಂದರಲ್ಲಿ ದೇಣಿಗೆ ಪಡೆಯುವ ಬದಲು ಪ್ರಸಾದವಾಗಿ ಹಣ ನೀಡಲಾಗುತ್ತಿದೆ ಅನ್ನೋ ಕ್ಯಾಪ್ಷನ್ ಜೊತೆ ಅಪ್‌ಲೋಡ್ ಆಗಿರೋ ಈ ವಿಡಿಯೋ ಈಗಾಗಲೇ 7 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಎಲ್ಲಿದೆ ಈ ದೇವಸ್ಥಾನ? ಏನಿದರ ರಹಸ್ಯ?

ಇಷ್ಟಕ್ಕೂ ಈ ವಿಚಿತ್ರ ಆಚರಣೆ ನಡೆಯುತ್ತಿರುವುದು ತಮಿಳುನಾಡಿನ ಶ್ರೀ ವರಮ್ ತರುಮ್ ಮಾಳಿಗೈಪರೈ ಕರುಪ್ಪಸಾಮಿ ದೇವಾಲಯದ ಉತ್ಸವದಲ್ಲಿ. ಇಲ್ಲಿ ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡುವ ನಾಣ್ಯಗಳನ್ನು ಸ್ಥಳೀಯವಾಗಿ "ಪಿಡಿ ಕಾಸು" (ಪವಿತ್ರ ನಾಣ್ಯಗಳು) ಎಂದು ಕರೆಯಲಾಗುತ್ತದೆ.
ನಮ್ಮಲ್ಲಿ ಮಂತ್ರಾಕ್ಷತೆ ಕೊಟ್ಟ ಹಾಗೆ, ಅಲ್ಲಿ ಈ ಪವಿತ್ರ ನಾಣ್ಯಗಳನ್ನು ಮನೆಗೆ ತಂದರೆ ಒಳ್ಳೆಯದಾಗುತ್ತೆ ಅನ್ನೋದು ಭಕ್ತರ ನಂಬಿಕೆ. ತಮಿಳುನಾಡು ಮತ್ತು ಕೇರಳ ಭಾಗದಲ್ಲಿ ಕರುಪ್ಪಸ್ವಾಮಿಯನ್ನು ಅತ್ಯಂತ ಉಗ್ರ ಹಾಗೂ ಶಕ್ತಿಶಾಲಿ ರಕ್ಷಕ ದೇವರು ಎಂದು ಪೂಜಿಸಲಾಗುತ್ತದೆ.
ಸಾಮಾನ್ಯವಾಗಿ ಈ ದೇವಸ್ಥಾನಗಳು ಹಳ್ಳಿಯ ಹೊರವಲಯದಲ್ಲಿರುತ್ತವೆ. ಇಲ್ಲಿನ ಆಚರಣೆಗಳು ಜಾನಪದ ಸಂಪ್ರದಾಯಕ್ಕೆ ಹತ್ತಿರವಾಗಿದ್ದು, ದೇವರಿಗೆ ಹಳ್ಳಿಗಾಡಿನ ಚುಟ್ಟಾ (ಬಿಡಿ) ಮತ್ತು ಮದ್ಯವನ್ನು ನೈವೇದ್ಯವಾಗಿ ಇಡುವುದು ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಪದ್ಧತಿ. ವಿಡಿಯೋದಲ್ಲಿ ಅರ್ಚಕರು ಸಹ ಬಿಡಿ ಸೇದುತ್ತಿರುವುದನ್ನು ನೋಡಬಹುದಾಗಿದೆ.

ನೆಟ್ಟಿಗರ ನಡುವೆ ಕಮೆಂಟ್ ಕಾಳಗ!

ಈ ವಿಡಿಯೋ ನೋಡಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ನೆಟ್ಟಿಗರು ಅಕ್ಷರಶಃ ಕಮೆಂಟ್​ ಬಾಕ್ಸ್​ನಲ್ಲಿ ಯುದ್ಧ ಮಾಡುತ್ತಿದ್ದಾರೆ.
ಇದು ಒಂಥರಾ ಬಿಸಿನೆಸ್ ಗುರು! 100 ರೂಪಾಯಿಯಲ್ಲಿ 2 ರೂಪಾಯಿ ಜನಕ್ಕೆ ವಾಪಸ್ ಕೊಟ್ಟು, ಉಳಿದ 98 ರೂಪಾಯಿನ ಜೇಬಿಗೆ ಇಳಿಸೋ ಪ್ಲಾನ್ ಇದು. ಜನರನ್ನು ಮರುಳು ಮಾಡೋ ತಂತ್ರ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರರು ಅರ್ಚಕನ ಕೈಯಲ್ಲಿ ಸಿಗರೇಟ್ ನೋಡಿ ದೇವರ ಹೆಸರಲ್ಲಿ ಇದೇನು ಅಸಂಬದ್ಧ? ಬಾಯಲ್ಲಿ ಸಿಗರೇಟ್ ಇಟ್ಕೊಂಡು ನಿಂತಿದ್ದಾನೆ, ಇಂತದ್ದನ್ನೆಲ್ಲಾ ಮೊದಲು ಬಂದ್ ಮಾಡಿಸಬೇಕು ಎಂದು ಜರೆದಿದ್ದಾರೆ.

ಸಂಪ್ರದಾಯದ ಪರ ಬ್ಯಾಟ್ ಬೀಸಿದ ಸ್ಥಳೀಯರು

ಆದರೆ, ದಕ್ಷಿಣ ಭಾರತದ ಜಾನಪದ ಸಂಪ್ರದಾಯ ಗೊತ್ತಿರುವವರು ಟೀಕಾಕಾರರಿಗೆ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಸ್ವಲ್ಪ ಇತಿಹಾಸ ತಿರುವಿ ನೋಡಿ. ಅದು ಕರುಪ್ಪುಸ್ವಾಮಿ ದೇವಸ್ಥಾನ. ಅಲ್ಲಿ ದೇವರಿಗೆ ಚುಟ್ಟಾ (ಬಿಡಿ) ಮತ್ತು ಮದ್ಯ ಇಡುವುದು ಸಂಪ್ರದಾಯ. ಅವರು ಹಳ್ಳಿಯ ರಕ್ಷಕ ದೇವರು. ಭಕ್ತರಿಗೆ ಒಳ್ಳೆಯದಾಗಲಿ ಅಂತಲೇ ಆ ನಾಣ್ಯಗಳನ್ನು ಕೊಡ್ತಾರೆ ಹೊರತು ಯಾವುದೇ ನಕಲಿ ಕೆಲಸ ಇಲ್ಲಿ ನಡೆಯುತ್ತಿಲ್ಲ ಎಂದು ಆಚರಣೆಯ ಹಿಂದಿನ ಸಾಂಸ್ಕೃತಿಕ ಹಿನ್ನೆಲೆಯನ್ನು ಬಿಚ್ಚಿಟ್ಟಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net