VIDEO | ಚಾಲಕರ ಕಷ್ಟ-ಸುಖ ಆಲಿಸಲು ಲಾರಿ ಏರಿದ ರಾಹುಲ್ ಗಾಂಧಿ!

Rahul Gandhi
Published on

ಹರಿಯಾಣ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಸಾರ್ವಜನಿಕರ ಮಧ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಾರೆ. ಸಾಮನ್ಯ ಜನರೊಂದಿಗೆ ಬೆರೆಯುತ್ತಾ, ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಾರೆ. ಇದೀಗ ರಾಹುಲ್ ಗಾಂಧಿ ದೆಹಲಿಯಿಂದ ಚಂಡೀಗಢಕ್ಕೆ ತೆರಳುತ್ತಿದ್ದ ವೇಳೆ ಹರಿಯಾಣದ ಅಂಬಾಲದಲ್ಲಿ ಲಾರಿ ಏರಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಾರಿಗಳ ಸಂಚಾರ ಹೆಚ್ಚಿರುತ್ತದೆ. ಅದರಲ್ಲೂ ರಾತ್ರಿಯ ವೇಳೆ ಲಾರಿ ಚಾಲಕರು ಎದುರಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ರಾಹುಲ್ ಗಾಂಧಿ ಲಾರಿಯಲ್ಲಿ ಸಂಚರಿಸಿದರು ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಒಟ್ಟಾರೆ ರಾಹುಲ್ ಗಾಂಧಿ ಟ್ರಕ್ ಏರಿರುವ ವಿಡಿಯೋ ವೈರಲ್ ಆಗುತ್ತಿದ್ದು, ಟ್ರೆಂಡಿಂಗ್​ನಲ್ಲಿದೆ.

ನಿನ್ನೆ ರಾತ್ರಿ ರಾಹುಲ್ ಗಾಂಧಿ ಲಾರಿಯಲ್ಲಿ ಸಂಚರಿಸಿದ್ದಾರೆ ಎನ್ನಲಾಗಿದೆ. ಯಾವುದೇ ಅಧಿಕೃತ ಕಾರ್ಯಕ್ರಮ ನಿಗದಿಯಾಗದೇ ಇರುವುದರಿಂದ ರಾಹುಲ್, ಶಿಮ್ಲಾದಲ್ಲಿರುವ ಪ್ರಿಯಾಂಕಾ ಗಾಂಧಿ ಅವರ ಮನೆಗೆ ತೆರಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಲಾರಿ ಏರಿ ಸ್ವಲ್ಪ ದೂರು ಸಂಚರಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನಾಟೆ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ರಾಹುಲ್ ಗಾಂಧಿ ದೇಶದ ಜನರ ಧ್ವನಿಯನ್ನು ಆಲಿಸುತ್ತಾರೆ. ಅಲ್ಲದೆ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಬಯಸುತ್ತಾರೆ ಎಂದು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net