ಹೊಸಬೆಂಗ್ರೆ ಅಂಗನವಾಡಿಯಲ್ಲಿ ತರಬೇತಿ ಕಾರ್ಯಕ್ರಮ

kota (1)
Published on

ಕೋಟ: ಇಲ್ಲಿನ ಕೋಡಿ ಪಂಚಾಯಿತಿ ವ್ಯಾಪ್ತಿಯ ಹೊಸಬೆಂಗ್ರೆ ಅಂಗನವಾಡಿಯಲ್ಲಿ ಕೋಡಿ ಗ್ರಾಮ ಪಂಚಾಯಿತಿ, ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಹಾಗೂ ಆರೋಗ್ಯ ಇಲಾಖೆ ಕೋಡಿಬೆಂಗ್ರೆ ಜಂಟಿಯೊಂದಿಗೆ ಸ್ತನ್ಯಪಾನ ಸಪ್ತಾಹ ಮತ್ತು ಬಾಲ್ಯ ವಿವಾಹ ನಿಷೇಧ ಹಾಗೂ ಮಹಿಳಾ ದೌರ್ಜನ್ಯ ನಿಷೇಧ ತರಬೇತಿ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಲಾಯಿತು. ಅಂಗನವಾಡಿ ಪುಟಾಣಿಗಳು ಹಾಗೂ ಪಾಲಕರ ಮೂಲಕ ಅಂಗನವಾಡಿಯಲ್ಲಿ ಗಿಡ ನೆಟ್ಟು ಪರಿಸರ ಜಾಗೃತಿ ಮೂಡಿಸಲಾಯಿತು. ಕೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಖಾರ್ವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋಡಿ ಆರೋಗ್ಯ ಇಲಾಖೆ ಪಿಎಚ್‌ಸಿಒ ಅಮಿತಾ ಸ್ತನ್ಯಪಾನದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಸಂಯೋಜಕಿ ಶಾರದಾ ಬಾಲ್ಯ ವಿವಾಹ ನಿಷೇಧ ಮತ್ತು ಮಹಿಳಾ ದೌರ್ಜನ್ಯದ ಬಗ್ಗೆ ತರಬೇತಿ ನೀಡಿದರು. ಬಾಲಾವಿಕಾಸ ಸಮಿತಿ ಅಧ್ಯಕ್ಷೆ ಸುಲೋಚನಾ, ಸಿಎಚ್‌ಒ ಪರಸಪ್ಪ, ಪಾಲಕರು ಹಾಗೂ ಸ್ತ್ರಿಶಕ್ತಿ ಸಂಘದವರು ಉಪಸ್ಥಿತರಿದ್ದರು. ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮೀ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಗನವಾಡಿ ಶಿಕ್ಷಕಿ ಯಮುನಾ ಎಲ್.ಕುಂದರ್ ಸ್ವಾಗತಿಸಿ, ನಿರೂಪಿಸಿದರು. ಆಶಾ ಕಾರ್ಯಕರ್ತೆ ಜ್ಯೋತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net