

ಹೇಮನಾಥ್ ಪಡುಬಿದ್ರಿ ಕಾಪು ತಾಲೂಕಿನಲ್ಲಿ ಎರಡು ಅಂಗನವಾಡಿಗಳಿಗೆ ಕಟ್ಟಡ ನಿರ್ಮಾಣಗೊಂಡು ತಿಂಗಳೂಗಳೇ ಕಳೆದರೂ, ಮಕ್ಕಳ ಕಲರವ ಕೇಳುವ ಭಾಗ್ಯ ಇನ್ನೂ ಇಲ್ಲವಾಗಿದೆ. ಶಿಷ್ಟಾಚಾರದ ನೆಪದಲ್ಲಿ ಕಟ್ಟಡ ಉದ್ಘಾಟನೆ ನೇಪಥ್ಯಕ್ಕೆ ಸರಿದಿದ್ದು, ಕುಂಜೂರು ಹಾಗೂ ಪಲಿಮಾರು ಅಂಗನವಾಡಿಯ ಮಕ್ಕಳು ಶಿಥಿಲ ಕಟ್ಟಡದಲ್ಲಿಯೇ ಕಲಿಯವಂತಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಿತ ವಿವಿಧ ಇಲಾಖೆಗಳ ಅನುದಾನ, ದಾನಿಗಳ ನೆರವು ಸೇರಿ 16.50 ಲಕ್ಷ ರೂ. ವೆಚ್ಚದಲ್ಲಿ ಎಲ್ಲೂರು ಗ್ರಾಮದ ಕುಂಜೂರು ದುರ್ಗಾನಗರ ಮತ್ತು ಪಲಿಮಾರು ಗ್ರಾಪಂ ಬಳಿಯಲ್ಲಿ ಅಂಗನವಾಡಿ ಕಟ್ಟಡಗಳು ನಿರ್ಮಾಣಗೊಂಡು ನಾಲ್ಕೈದು ತಿಂಗಳಾಗಿದೆ. ಇವುಗಳ ಉದ್ಘಾಟನೆಗಾಗಿ ಪಲಿಮಾರು ಗ್ರಾಮ ಪಂಚಾಯಿತಿ ಎರಡು ಬಾರಿ ದಿನಾಂಕ ನಿಗದಿ ಮಾಡಿದ್ದರೂ, ಶಿಷ್ಟ್ಟಾಚಾರದ ನೆಪದಲ್ಲಿ ಮುಂದೂಡಲಾಗುತ್ತಿದೆ. ಸುಸಜ್ಜಿತವಾದ ಸ್ವಂತ ಕಟ್ಟಡಗಳಿದ್ದರೂ ಅಂಗನವಾಡಿ ಪುಟಾಣಿಗಳು ಎರಡು ವರ್ಷಗಳಿಂದ ಪಲಿಮಾರು ಪ್ರಾಥಮಿಕ ಶಾಲೆ ಕೊಠಡಿಯಲ್ಲೇ ಕಲಿಯುವಂತಾಗಿದೆ. ಮಳೆಯಿಂದ ಸೋರುತ್ತಿದ್ದ ಕೊಠಡಿಯನ್ನು ಗ್ರಾಪಂ ದುರಸ್ತಿ ಮಾಡಿತ್ತು.
ಕುಂಜೂರು ರೈಲ್ವೆ ಬ್ರಿಡ್ಜ್ ಬಳಿಯ ದುರ್ಗಾನಗರದಲ್ಲಿ ಶಿಥಿಲಗೊಂಡಿದ್ದ ಹಳೇ ಅಂಗನವಾಡಿ ಕಟ್ಟಡವನ್ನು ಇಲಾಖೆ ಅನುಮತಿ ಪಡೆದು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. ರೈಲ್ವೆ ಇಲಾಖೆಯ ಅಡಚಣೆ ಸಹಿತ ತಾಂತ್ರಿಕ ಕಾರಣಗಳಿಂದಾಗಿ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಅಂಗನವಾಡಿ ಕಟ್ಟಡ ಇನ್ನೂ ಉದ್ಘಾಟನೆಗೊಂಡಿಲ್ಲ. ಈ ಅಂಗನವಾಡಿಗೆ ಸೇರಿದ 16 ಮಕ್ಕಳು ಬೇರೆ ಶಾಲೆಯೊಂದರ ಕೊಠಡಿಯಲ್ಲಿ ಕಲಿಯುತ್ತಿದ್ದಾರೆ.
ಸ್ಥಳೀಯಾಡಳಿತ ಅಂಗನವಾಡಿ ಕಟ್ಟಡ ಉದ್ಘಾಟನೆಗೆ ಮುಂದಾದರೂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾಗಿರುವ ಉಸ್ತುವಾರಿ ಸಚಿವರಿಂದಲೇ ಉದ್ಘಾಟನೆಯಾಗಬೇಕೆಂಬ ಸರ್ಕಾರಿ ಶಿಷ್ಟಾಚಾರದಿಂದಾಗಿ ಇಲಾಖಾಧಿಕಾರಿಗಳು ಸಚಿವೆಯನ್ನೇ ನಿರೀಕ್ಷಿಸುತ್ತಿದ್ದಾರೆ. ಈ ಧೋರಣೆಯನ್ನು ಸ್ಥಳೀಯರು ವಿರೋಧಿಸಿದ್ದಾರೆ.
ಗ್ರಾಪಂನ ನಿಕಟಪೂರ್ವ ಅಧ್ಯಕ್ಷರ ನಿರಂತರ ಶ್ರಮದಿಂದ ಅನುದಾನಗಳ ಕ್ರೋಡೀಕರಣದೊಂದಿಗೆ ಇಲ್ಲಿ ಅಂಗನವಾಡಿ ನಿರ್ವಾಣವಾಗಿದೆ. ಹಾಲಿ ಅಧ್ಯಕ್ಷರ ಕೊಡುಗೆಯಿಂದ ಅಂಗನವಾಡಿ ಒಳಭಾಗದಲ್ಲಿ ಸುಂದರ ಗೋಡೆ ಬರಹ ರಚಿಸಲಾಗಿದೆ. ಎರಡು ಬಾರಿ ಅಂಗನವಾಡಿ ಉದ್ಘಾಟನೆಗೆ ದಿನ ನಿಗದಿ ಮಾಡಿದ್ದರೂ, ಸರ್ಕಾರದ ಶಿಷ್ಟಾಚಾರ ನೆಪದಲ್ಲಿ ಅದನ್ನು ಮುಂದೂಡುತ್ತಾ ಬಂದಿರುವುದು ಸಮಂಜಸವಲ್ಲ. -ರಾಯೇಶ್ವರ ಪೈ, ಉಪಾಧ್ಯಕ್ಷರು ಪಲಿವಾರು ಗ್ರಾಪಂ. ಕಾರಣಾಂತರದಿಂದ ಕುಂಜೂರು ಹಾಗೂ ಪಲಿಮಾರು ಅಂಗನವಾಡಿ ಕೇಂದ್ರದ ಉದ್ಘಾಟನೆ ವಿಳಂಬವಾಗಿದೆ. ಈ ಬಗ್ಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳೊಂದಿಗೆ ವಿವರಣೆ ಪಡೆದುಕೊಳ್ಳಲಾಗಿದೆ. ಉಸ್ತುವಾರಿ ಸಚಿವರು ಆ.15ರಂದು ಉಡುಪಿಗೆ ಆಗಮಿಸಲಿದ್ದು, 16ರಂದು ಎರಡೂ ಅಂಗನವಾಡಿಗಳ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಶ್ಯಾಮಲಾ, ಉಪನಿರ್ದೇಶಕಿ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ, ಉಡುಪಿ