

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳಲ್ಲಿನ ನೌಕರರ ತರಬೇತಿ ಅವಧಿ 2 ವರ್ಷದಿಂದ 1 ವರ್ಷಕ್ಕಿಳಿಸಿ ಸಾರಿಗೆ ಇಲಾಖೆ ಆದೇಶಿಸಿದೆ. ಆ ಮೂಲಕ ಸಾರಿಗೆ ನೌಕರರ 9 ಬೇಡಿಕೆಗಳ ಪೈಕಿ 8 ಬೇಡಿಕೆ ಈಡೇರಿದಂತಾಗಿದೆ.
ಸಾರಿಗೆ ನೌಕರರ ವೇತನಕ್ಕೆ 6ನೇ ವೇತನ ಆಯೋಗದ ಶಿಾರಸು ಅಳವಡಿಕೆ ಸೇರಿ 10 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ಡಿಸೆಂಬರ್ನಲ್ಲಿ ಸಾರಿಗೆ ನೌಕರರು ದೊಡ್ಡ ಮಟ್ಟದಲ್ಲಿ ಪ್ರತಿಭಟಿಸಿದ್ದರು. ಆ ವೇಳೆ 10 ಬೇಡಿಕೆಗಳ ಪೈಕಿ 9 ಬೇಡಿಕೆ ಈಡೇರಿಸುವ ಕುರಿತು ಸರ್ಕಾರ ಭರವಸೆ ನೀಡಿತ್ತು. ಅದರಂತೆ ಇದೀಗ ಆರೋಗ್ಯ ವಿಮೆ, ಕರೊನಾದಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ಸೇರಿ ಇನ್ನಿತರ 7 ಬೇಡಿಕೆಗಳನ್ನು ಕಳೆದೆರಡು ತಿಂಗಳಿನಿಂದ ಈಡೇರಿಸಲಾಗಿದೆ. ಇದೀಗ ತರಬೇತಿ ನೌಕರರ ಅವಧಿ ಕಡಿತಕ್ಕೂ ಸರ್ಕಾರ ಒಪ್ಪಿಗೆ ಸೂಚಿಸಿದೆ. ಅದರಂತೆ 2 ವರ್ಷದ ತರಬೇತಿ ಅವಧಿಯನ್ನು 1 ವರ್ಷಕ್ಕೆ ಇಳಿಸಲಾಗಿದೆ.
6ನೇ ವೇತನ ಆಯೋಗವೇ ಮುಖ್ಯ: ಸರ್ಕಾರ ನೌಕರರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತಿದೆ. ಆದರೂ, ಸಾರಿಗೆ ನೌಕರರು ಮಾತ್ರ ತಮಗೂ ಮತ್ತು ಸರ್ಕಾರಿ ನೌಕರರಿಗಿರುವ ವೇತನ ತಾರತಮ್ಯ ನಿವಾರಿಸಲು ಆಗ್ರಹಿಸುತ್ತಿದ್ದಾರೆ. ಅದಕ್ಕಾಗಿ 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸುತ್ತಿದ್ದು, ಅಲ್ಲಿಯವರೆಗೆ ಬೇಡಿಕೆ ಈಡೇರಿಕೆ ಪೂರ್ಣವಾಗುವುದಿಲ್ಲ ಎಂದು ಹೇಳುತ್ತಿದ್ದಾರೆ.