ವಿದ್ಯೆಯ ಜತೆ ಸಂಸ್ಕಾರವಿದ್ದರೆ ಬೆಲೆ : ಅರ್ಚನಾ ರಾಜೇಶ್ ಪೈ ಅನಿಸಿಕೆ

rudset
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಮನುಷ್ಯನಿಗೆ ವಿದ್ಯೆ ದೊಡ್ಡ ಸಂಪತ್ತು. ಕನಸುಗಳನ್ನು ನನಸಾಗಿಸಲು ವಿದ್ಯೆ ಇರಬೇಕು. ಕಲಿತ ವಿದ್ಯೆ ಜತೆ ಸಂಸ್ಕಾರ ಇದ್ದರೆ ವಿದ್ಯೆಗೆ ಬೆಲೆ ಬರುವುದು. ನಿಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಅದನ್ನು ಕಲಿತು ವೃತ್ತಿಯನ್ನಾಗಿಸಿಕೊಂಡು ಬೆಳೆಯಬೇಕು ಎಂದು ಉಜಿರೆಯ ಅರ್ಚನಾ ರಾಜೇಶ್ ಪೈ ಹೇಳಿದರು.

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನ ನಡೆದ ವಸತ್ತ್ರ ಚಿತ್ರಕಲಾ ಉದ್ಯಮಿ (ಎಂಬ್ರಾಯ್ಡರಿ, ಫ್ಯಾಬ್ರಿಕ್ ಪೈಂಟಿಂಗ್) ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು. ಡಾ.ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಅತ್ಯುತ್ತಮವಾದ ಸೌಲಭ್ಯಗಳೊಂದಿಗೆ ತರಬೇತಿ ನೀಡುತ್ತಿರುವುದು ಬಹಳ ಸಂತೋಷ. ಈ ವಿದ್ಯೆ ಯಾವುದೇ ಕಾರಣಕ್ಕೂ ಬಿಡಬೇಡಿ. ಸ್ಪರ್ಧೆ ಇದ್ದಾಗಲೂ ನೈತಿಕತೆ ಬಿಟ್ಟು ವ್ಯವಹಾರ ಮಾಡಬೇಡಿ. ವ್ಯವಹಾರವನ್ನು ಹಂತ ಹಂತವಾಗಿ ಆರಂಭಿಸಿ, ನಾನು ಎನ್ನುವ ಭಾವನೆಗಿಂತ ನಾವು ಎನ್ನುವ ಭಾವನೆಯೊಂದಿಗೆ ವ್ಯವಹಾರ ನಡೆಸಿ. ವ್ಯವಹಾರದಲ್ಲಿ ಆಳಾಗಿ ದುಡಿದು, ಮಾಲೀಕರಾಗಿ ಎಂದರು.

ರುಡ್‌ಸೆಟ್ ಸಂಸ್ಥೆ ನಿರ್ದೇಶಕ ಅಜೇಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ, ಬ್ಯಾಂಕಿನ ಹೊಸ ಯೋಜನೆ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದರು.

ರಶ್ಮಿ ರಾಘವೇಂದ್ರ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು. ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಸ್ವಾಗತಿಸಿದರು. ಉಪನ್ಯಾಸಕ ಕೆ.ಕರುಣಾಕರ ಜೈನ್ ವಂದಿಸಿದರು. ಸುಮಾರು 30 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಸುಷ್ಮಾ, ಪುಷ್ಪಾ ಜೈನ್, ರಕ್ಷಿತಾ ರೈ ತರಬೇತಿ ಅನುಭವ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net