ತಾಪಂ, ಜಿಪಂ, ಸ್ಥಳೀಯ ಸಂಸ್ಥೆಗಳಿಗೂ ಮೈತ್ರಿ ಮುಂದುವರಿಸುವ ಬಗ್ಗೆ ಗರಿಗೆದರಿದ ಚರ್ಚೆ

BJP and JDS
Published on

ಬೆಂಗಳೂರು:
ಲೋಕಸಭೆ ಚುನಾವಣೆ ಮತ್ತು ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಲಿತಾಂಶವೂ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮೈತ್ರಿ ಮುಂದುವರಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ಶುರುವಾಗಿದೆ.
ಮುಂಬರಲಿರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದೇ ರೀತಿಯಲ್ಲಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೆ, ಎರಡೂ ಪಕ್ಷಗಳಿಗೂ ಲಾಭವಾಗಲಿದೆ ಎನ್ನುವ ತರ್ಕದ ಚರ್ಚೆಗಳು ಎರಡೂ ಪಕ್ಷದಲ್ಲಿವೆ.
ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಪ್ರದಾಯಿಕವಾಗಿ ಜೆಡಿಎಸ್ ಎದುರಾಳಿ. ಇನ್ನುಳಿದಂತೆ ಎಲ್ಲ ಕಡೆಯಲ್ಲೂ ಬಿಜೆಪಿ ಎದುರಾಳಿಯಾಗಿದೆ. ಆದ್ದರಿಂದ ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು, ಇನ್ನುಳಿದ ಕಡೆಯಲ್ಲಿ ಬಿಜೆಪಿ ಸ್ಪರ್ಧೆ ಮಾಡಬಹುದು ಎನ್ನುವ ಅಭಿಪ್ರಾಯಗಳು ಪಕ್ಷದಲ್ಲಿವೆ.
ಜೆಡಿಎಸ್ ಹಾಲಿ ಶಾಸಕರು ಇರುವ ಕ್ಷೇತ್ರ ಮತ್ತು ಕಡಿಮೆ ಅಂತರದಿಂದ ಸೋಲಾಗಿರುವ ಕ್ಷೇತ್ರಗಳನ್ನು ಪರಿಗಣಿಸಿದರೆ 60 ರಿಂದ 70 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್ ನೆಲೆ ಸಿಗಬಹುದು. ಇನ್ನು 150 ರಿಂದ 160 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಯಾವುದೇ ಸಮಸ್ಯೆ ಬರುವುದಿಲ್ಲ. ಆದ್ದರಿಂದ ಪರಸ್ಪರ ಹೊಂದಾಣಿಕೆಯಿಂದ ಹೋಗುವುದು ಉತ್ತಮ ಎನ್ನುವ ಅಭಿಮತ ಎರಡೂ ಪಕ್ಷಗಳಲ್ಲಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ಆಗಿರುವುದರಿಂದ ಹೊಂದಾಣಿಕೆ ದೊಡ್ಡ ಪ್ರಮಾಣದಲ್ಲಿ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆ ಮಾಡುವುದು ಸೂಕ್ತ. ಗೆದ್ದ ಮೇಲೆ ಅಧಿಕಾರ ಹಿಡಿಯುವಾಗ ಹೊಂದಾಣಿಕೆಯಿಂದ ಹೋಗುವುದು ಸರಿಯಾದ ಕ್ರಮ ಎಂದು ಬಿಜೆಪಿ ಹಿರಿಯ ನಾಯಕರುಗಳು ಸಲಹೆ ನೀಡಿದ್ದಾರೆ.
ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿಯನ್ನು ಮುಂದುವರಿಸುವ ಸಾಧಕ ಬಾಧಕಗಳ ಬಗ್ಗೆ ಇನ್ನಷ್ಟು ಚರ್ಚೆ ಮಾಡಿ ಬಳಿಕ ಸಹಮತಕ್ಕೆ ಬರುವ ಸಾದ್ಯತೆ ಇದೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net