ಸೆಕ್ಯೂರಿಟಿ ಗಾರ್ಡ್​ಗೆ ಚಪ್ಪಲಲ್ಲಿ ಹೊಡೆದ ಮಹಿಳೆ! ಅಸಲಿಗೆ ಆದದ್ದಿಷ್ಟು…

crimwe
Published on

ಪಣಜಿ: ಓಲ್ಡ್ ಗೋವಾದ ಚರ್ಚ್‌ನಲ್ಲಿ ಭದ್ರತಾ ಸಿಬ್ಬಂದಿಗೆ (ಸೆಕ್ಯೂರಿಟಿ ಗಾರ್ಡ್) ಚಪ್ಪಲಿಯಿಂದ ಮಹಿಳೆಯೊಬ್ಬರು ಹೊಡೆದಿರುವ ವಿಡಿಯೋ ವೈರಲ್ ಆಗಿದ್ದು ಆ ಪ್ರವಾಸಿಯ ವಿರುದ್ಧ ಗೋವಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಚರ್ಚ್ ಗೇಟ್ ಬಳಿ ಮಹಿಳೆ ಭದ್ರತಾ ಸಿಬ್ಬಂದಿಯೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದು ನಂತರ ಒಬ್ಬರಿಗೆ ಚಪ್ಪಲಿಯಲ್ಲಿ ಹೊಡೆದ ಘಟನೆಯ ವೀಡಿಯೊ ವೈರಲ್​ ಆದ ನಂತರ, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೂಲಗಳ ಪ್ರಕಾರ, ಚರ್ಚ್ ಆವರಣಕ್ಕೆ ಪ್ರವೇಶಿಸಲು ನಿಗದಿತ ಸಮಯದಲ್ಲಿ ಮಾತ್ರ ಅನುಮತಿಸಲಾಗಿದ್ದು ಈ ವಿಚಾರವಾಗಿ ಮಹಿಳೆ ಮತ್ತು ಭದ್ರತಾ ಸಿಬ್ಬಂದಿ ನಡುವಿನ ವಾಗ್ವಾದ ಉಂಟಾಗಿದೆ.

ಈ ಘಟನೆ ಕುರಿತು ಸೋಮವಾರ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಪ್ರವಾಸಿಗರು ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ. "ಹಳೆ ಗೋವಾದಲ್ಲಿ ಸಂಭವಿಸಿದ ಈ ಘಟನೆಯಲ್ಲಿ, ಮಹಿಳೆ ಭದ್ರತಾ ಸಿಬ್ಬಂದಿ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಲು ಪ್ರಯತ್ನಿಸಿದರು. ಅಂತಹ ಘಟನೆಗಳನ್ನು ನಾವು ಸಹಿಸುವುದಿಲ್ಲ. ನಾನ್ ಕಾಗ್ನಿಜಬಲ್ ಅಪರಾಧವನ್ನು ಮಹಿಳೆ ವಿರುದ್ಧ ದಾಖಲಿಸಲಾಗಿದ್ದು ಪೊಲೀಸರು ಆ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ" ಎಂದು ಅವರು ಹೇಳಿದರು.

"ಪ್ರವಾಸಿಗರು ಗೋವಾದ ಕಾನೂನನ್ನು ಅನುಸರಿಸಬೇಕು. ಪ್ರವಾಸಿಗರು ಸೂಕ್ತ ಕಚೇರಿಯಲ್ಲಿ ದೂರು ನೀಡಿದರೆ ನಾವು ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಅಂತಹ ಯಾವುದೇ ಸಂದರ್ಭಗಳನ್ನು ನಿಭಾಯಿಸಲು ಪೊಲೀಸರು ಸಮರ್ಥರಾಗಿದ್ದಾರೆ" ಎಂದು ಅವರು ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net