

ಪಂಜಾಬ್: ಆಪ್ ಶಾಸಕ ಹಾಗೂ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್, ಈ ತಿಂಗಳ ಕೊನೆಯಲ್ಲಿ ಐಪಿಎಸ್ ಅಧಿಕಾರಿ ಜ್ಯೋತಿ ಯಾದವ್ ಅವರೊಂದಿಗೆ ವಿವಾಹವಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ದಂಪತಿಗಳು ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ರೂಪನಗರ ಜಿಲ್ಲೆಯ ಆನಂದಪುರ ಸಾಹಿಬ್ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿರುವ ಬೈನ್ಸ್ ಅವರು ಪ್ರಸ್ತುತ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದಾರೆ.
ಪಂಜಾಬ್ ಅಸೆಂಬ್ಲಿ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವನ್ ಅವರು "ಮುಂಬರುವ ದಿನಗಳಲ್ಲಿ ತಮ್ಮ ಜೀವನದ ಹೊಸ ಪ್ರಯಾಣವನ್ನು ಪ್ರಾರಂಭಿಸಲಿರುವ" ಬೈನ್ಸ್ ಮತ್ತು ಯಾದವ್ ಅವರನ್ನು ಅಭಿನಂದಿಸಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿರುವ 32 ವರ್ಷದ ಹರ್ಜೋತ್ ಬೈನ್ಸ್, ಆನಂದಪುರ ಸಾಹಿಬ್‌ನ ಗಂಭೀರ್‌ಪುರ ಗ್ರಾಮದವರು. 2017ರ ಚುನಾವಣೆಯಲ್ಲಿ ಸಾಹ್ನೇವಾಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಅದಷ್ಟೇ ಅಲ್ಲದೇ ಈ ಹಿಂದೆ ಬೈನ್ಸ್ ಈ ಹಿಂದೆ ರಾಜ್ಯದಲ್ಲಿ ಎಎಪಿಯ ಯುವ ಘಟಕವನ್ನು ಮುನ್ನಡೆಸಿದ್ದರು.
ಅವರು 2014ರಲ್ಲಿ ಚಂಡೀಗಢದ ಪಂಜಾಬ್ ವಿಶ್ವವಿದ್ಯಾನಿಲಯದಿಂದ ತಮ್ಮ BA LLB (ಹಾನರ್ಸ್) ಪೂರ್ಣಗೊಳಿಸಿದರು. ಅವರು 2018 ರಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನಲ್ಲಿ ಪ್ರಮಾಣಪತ್ರವನ್ನು ಗಳಿಸಿದರು.
ಐಪಿಎಸ್ ಅಧಿಕಾರಿ ಜ್ಯೋತಿ ಯಾದವ್, ಪಂಜಾಬ್-ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಮಾನ್ಸಾ ಜಿಲ್ಲೆಯಲ್ಲಿ ಪೊಲೀಸ್ ಸೂಪರಿಂಟೆಂಡೆಂಟ್ ಆಗಿ ನೇಮಕಗೊಂಡಿದ್ದಾರೆ.
ಹರಿಯಾಣದ ಗುರುಗ್ರಾಮ್‌ನಿಂದ ಬಂದ ಜ್ಯೋತಿ ಯಾದವ್, ಕಳೆದ ವರ್ಷ ಆಪ್ ಶಾಸಕ ರಾಜಿಂದರ್‌ಪಾಲ್ ಕೌರ್ ಅವರೊಂದಿಗೆ ಮಾಡಿದ್ದ ಸಾರ್ವಜನಿಕ ವಾಗ್ವಾದದ ನಂತರ ಜನರ ಗಮನಕ್ಕೆ ಬಿದ್ದಿದ್ದರು. ಐಪಿಎಸ್ ಅಧಿಕಾರಿಯು ತನಗೆ ಮಾಹಿತಿ ನೀಡದೆ ತನ್ನ ವಿಧಾನಸಭಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಆಪ್ ಶಾಸಕ ರಾಜಿಂದರ್‌ಪಾಲ್ ಕೌರ್ ಆರೋಪಿಸಿದ್ದರು. (ಏಜೆನ್ಸೀಸ್)