

ನವದೆಹಲಿ: ಕರೊನಾ ಪೀಡಿತರ ಸಂಖ್ಯೆ ಭಾರತದಲ್ಲಿ ಗುರುವಾರ ಬೆಳಗ್ಗೆ 9 ಗಂಟೆಯ ವರದಿ ಪ್ರಕಾರ 166ಕ್ಕೆ ಏರಿಕೆಯಾಗಿದೆ. ಈ ಪೈಕಿ 144 ಭಾರತೀಯರಾಗಿದ್ದರೆ, 25 ವಿದೇಶಿ ಪ್ರಜೆಗಳು. ಇದರಲ್ಲಿ 3 ಜನರ ಸಾವು ಕೂಡ ಸೇರಿದೆ.
ಕರೊನಾ ವೈರಸ್ ಕುರಿತಾಗಿ ಕೇಂದ್ರ ಆರೋಗ್ಯ ಸಚಿವಾಲಯ ವರದಿ ನೀಡಿದ್ದು, ಮಹಾರಾಷ್ಟ್ರದಲ್ಲಿ ಗರಿಷ್ಠ 42, ಕೇರಳ 25, ಉತ್ತರ ಪ್ರದೇಶ 16, ಕರ್ನಾಟಕ 14, ದೆಹಲಿ 11 ಪ್ರಕರಣಗಳಿವೆ. 166 ಪ್ರಕರಣಗಳ ಪೈಕಿ 15 ಜನರ ಆರೋಗ್ಯ ಸುಧಾರಿಸಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿರುವುದಾಗಿ ತಿಳಿಸಿದೆ.
ದೇಶದಲ್ಲಿ ಕರೊನಾ ಸೋಂಕಿನ ಪ್ರಕರಣ ವ್ಯಾಪಕ ವಾಗುತ್ತಿರುವ ಬೆನ್ನಲ್ಲೇ ಮಾರಕ ವೈರಸ್ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಗುರು ವಾರ ರಾತ್ರಿ 8ಕ್ಕೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಭಾಷಣಕ್ಕೂ ಮೊದಲು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಸೋಂಕಿತರ ಪರೀಕ್ಷಾ ಸೌಲಭ್ಯ ವಿಸ್ತರಣೆ ಮುಖ್ಯವಾಗಿ ಚರ್ಚೆಯಾಗುವ ನಿರೀಕ್ಷೆ ಇದೆ. (ಏಜೆನ್ಸೀಸ್)