Jairam Ramesh | ಗಾಜಾ ದೌರ್ಜನ್ಯದ ಬಗ್ಗೆ ಪ್ರಧಾನಿ ಮೋದಿ ಮೌನ; ನೈತಿಕ ಹೇಡಿತನ ಎಂದು ಕಾಂಗ್ರೆಸ್​ ನಾಯಕ ಜೈರಾಮ್​ ರಮೇಶ್​ ಟೀಕೆ

Jairam Ramesh Narendra Modi
Published on

Jairam Ramesh: ಕಳೆದ ಇಪ್ಪತ್ತು ತಿಂಗಳಿನಿಂದ ಗಾಜಾದಲ್ಲಿ ನಡೆದ ಭೀಕರ ದೌರ್ಜನ್ಯಗಳ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಮೌನದ ಟೀಕಿಸಿರುವ ಕಾಂಗ್ರೆಸ್ ನಾಯಕ ಜೈರಾಮ್​ ರಮೇಶ್​ ಬುಧವಾರ (ಸೆ 1) ಟೀಕಿಸಿದ್ದಾರೆ.

ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ರಮೇಶ್​, ಇದು ನೈತಿಕ ಹೇಡಿತನ ಮತ್ತು ಭಾರತ ಇಷ್ಟು ವರ್ಷ ಪ್ರತಿಪಾದಿಸಿದ ತತ್ವಗಳಿಗೆ ದ್ರೋಹ ಮಾಡಿದಂತಾಗಿದೆ ಎಂದು ಹೇಳಿದ್ದಾರೆ.

ತಮ್ಮ ಆತ್ಮೀಯ ಸ್ನೇಹಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸಮಾಧಾನಪಡಿಸಲು ಮತ್ತು ಅವರ ಮತ್ತೊಬ್ಬ ಆತ್ಮೀಯ ಸ್ನೇಹಿತ ಇಸ್ರೇಲ್​ ಪ್ರಧಾನಿ ನೆತನ್ಯಾಹು ಅವರೊಂದಿಗೆ ಒಗ್ಗಟ್ಟಿನಿಂದಿರಲು ಪ್ರಧಾನಿ ಮೋದಿ ಟ್ರಂಪ್​ರ ಹೊಸ 20 ಅಂಶಗಳ ಯೋಜನೆಯನ್ನು ಸ್ವಾಗತಿಸಿದ್ದಾರೆ, ಆದರೆ, ಇದರಲ್ಲಿ ಅನೇಕ ಮೂಲಭೂತ ಮತ್ತು ಗೊಂದಲದ ಪ್ರಶ್ನೆಗಳು ಹಾಗೆ ಉಳಿದಿವೆ ಎಂದರು. ಪ್ರಸ್ತಾಪಿತ ಯೋಜನೆಯ ಆಡಳಿತ ವ್ಯವಸ್ಥೆಯಲ್ಲಿ ಗಾಜಾದ ಜನರು ಎಲ್ಲಿದ್ದಾರೆ? ಪೂರ್ಣ ಪ್ರಮಾಣದ ಪ್ಯಾಲೆಸ್ಟೀನಿಯನ್ ರಾಷ್ಟ್ರ ಅಸ್ತಿತ್ವಕ್ಕೆ ಬರುವ ಮಾರ್ಗಸೂಚಿ ಎಲ್ಲಿದೆ? ಈಗಾಗಲೇ ವಿಶ್ವಸಂಸ್ಥೆಯ 157 ಸದಸ್ಯ ರಾಷ್ಟ್ರಗಳು ಗುರುತಿಸಿರುವ ಪ್ಯಾಲೆಸ್ಟೀನಿಯನ್ ರಾಜ್ಯತ್ವವನ್ನು ಅಮೆರಿಕ ಮತ್ತು ಇಸ್ರೇಲ್ ಎಷ್ಟು ವರ್ಷ ನಿರ್ಲಕ್ಷಿಸುತ್ತಲೇ ಇರುತ್ತವೆ..? ಕಳೆದ ಇಪ್ಪತ್ತು ತಿಂಗಳುಗಳಲ್ಲಿ ಗಾಜಾದಲ್ಲಿ ನಡೆದ ನರಮೇಧಕ್ಕೆ ಹೊಣೆ ಯಾರು ಎಂದು ಜೈರಾಮ್​ ರಮೇಶ್​ ಪ್ರಶ್ನಿಸಿದರು.

ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದ ಬಗ್ಗೆ ಕಾಂಗ್ರೆಸ್​​ ನಿರಂತರವಾಗಿ ಕೇಂದ್ರ ಸರ್ಕಾರ ನಿಲುವನ್ನು ಟೀಕಿಸುತ್ತಿದ್ದು, ಕಳೆದ ವಾರ ಫ್ರಾನ್ಸ್ ಯುನೈಟೆಡ್ ಕಿಂಗ್‌ಡಮ್, ಕೆನಡಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳೊಂದಿಗೆ ಪ್ಯಾಲೆಸ್ಟೈನ್ ರಾಷ್ಟ್ರವನ್ನು ಗುರುತಿಸಿದ ನಂತರ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪತ್ರಿಕೆಯೊಂದರಲ್ಲಿ ತಮ್ಮ ಅಭಿಪ್ರಾಯ ಬರೆದರು, ಅದರಲ್ಲಿ ಅವರು ಪ್ಯಾಲೆಸ್ಟೈನ್ ಬಗ್ಗೆ ಮೋದಿ ಸರ್ಕಾರದ ನಿಲುವನ್ನು ಟೀಕಿಸಿದರು. ಇದಕ್ಕೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್​​ ಗಾಂಧಿ ಮತ್ತು ಅವರ ಸಹೋದರಿ, ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಧ್ವನಿ ಎತ್ತಿದ್ದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net