ಭಾರತದ ವಿರುದ್ಧ 3 ಪಂದ್ಯಗಳಲ್ಲಿ ಮುಖಭಂಗ: ಪಾಕ್​ ಆಟಗಾರರಿಗೆ ಪಿಸಿಬಿ ಶಾಕ್​! ಅಯ್ಯೋ ಇಂಥಾ ಸ್ಥಿತಿ ಬರಬಾರದಿತ್ತು... Pakistan Cricket

Pakistan Cricket
Published on

Pakistan Cricket : ತಮ್ಮ ಆಟಗಾರರ ಮೇಲೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಏಷ್ಯಾ ಕಪ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ತಂಡದ ವಿರುದ್ಧ ಸತತ ಮೂರು ಪಂದ್ಯಗಳನ್ನು ಸೋತಿದ್ದಕ್ಕೆ ಇನ್ನು ಮುಂದೆ ಎಲ್ಲಾ ವಿಷಯಗಳಲ್ಲಿಯೂ ತಮ್ಮ ಆಟಗಾರರನ್ನು ಕಟ್ಟುನಿಟ್ಟಾಗಿ ನಡೆಸಿಕೊಳ್ಳಲು ಪಿಸಿಬಿ ಮುಂದಾಗಿದೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿವೆ.

ಏಷ್ಯಾಕಪ್​​​ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾದವು. ಈ ಹೈವೋಲ್ಟೇಜ್​ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವಿನೊಂದಿಗೆ ಟ್ರೋಫಿ ಜಯಿಸಿತು. ಇನ್ನು ಅದೇ ಪಂದ್ಯಾವಳಿಯಲ್ಲಿ, ಲೀಗ್ ಹಂತ ಮತ್ತು ಸೂಪರ್-4 ಹಂತದಲ್ಲಿಯು ಉಭಯ ತಂಡಗಳು ಮುಖಾಮುಖಿಯಾದವು. ಆ ಪಂದ್ಯಗಳನ್ನು ಟೀಮ್ ಇಂಡಿಯಾವೇ ಗೆದ್ದಿತು. ಎರಡೂ ತಂಡಗಳ ನಡುವೆ ಒಟ್ಟು ಮೂರು ಪಂದ್ಯಗಳು ನಡೆದವು ಮತ್ತು ಟೀಮ್ ಇಂಡಿಯಾ ಎಲ್ಲಾ ಪಂದ್ಯಗಳನ್ನು ಗೆದ್ದಿತು.

ವಿಶೇಷವಾಗಿ ಫೈನಲ್‌ನಲ್ಲಿನ ಸೋಲಿನ ನಂತರ, ಪಾಕ್​ ಕ್ರಿಕೆಟ್ ಅಭಿಮಾನಿಗಳು ತಮ್ಮ ಆಟಗಾರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಂಡವನ್ನು ಆಯ್ಕೆ ಮಾಡಿದವರ ವಿರುದ್ಧವೂ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಸಾಕಷ್ಟು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಮ್ಮ ಆಟಗಾರರ ಮೇಲೆ ನಿರ್ಬಂಧಗಳನ್ನು ವಿಧಿಸಲು ಸಿದ್ಧವಾಗಿದೆ.

ಇಎಸ್‌ಪಿಎನ್‌ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ಸೋಲಿನ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಇನ್ನು ಮುಂದೆ, ಪಾಕಿಸ್ತಾನಿ ಆಟಗಾರರಿಗೆ ವಿದೇಶಿ ಕ್ರಿಕೆಟ್ ಲೀಗ್‌ಗಳಲ್ಲಿ ಭಾಗವಹಿಸಲು ಅವಕಾಶ ನೀಡದಿರಲು ಪಿಸಿಬಿ ನಿರ್ಧರಿಸಿದೆ ಮತ್ತು ಇದಕ್ಕಾಗಿ, ಪಿಸಿಬಿ ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ನೀಡದಿರಲು ನಿರ್ಧಾರ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪಿಸಿಬಿ ಕಾರ್ಯಾಚರಣೆ ಮುಖ್ಯಸ್ಥ ಸುಮೈರ್ ಅಹ್ಮದ್ ಸೈಯದ್, ಆಟಗಾರರು ಮತ್ತು ಅವರ ಏಜೆಂಟ್‌ಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದಿದ್ದಾರೆ. ಈ ನಿರ್ಧಾರದಿಂದ ಪಾಕಿಸ್ತಾನಿ ಆಟಗಾರರು ಪ್ರಸ್ತುತ ನಡೆಯುತ್ತಿರುವ ಟಿ20 ಫ್ರಾಂಚೈಸಿ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.

ಇನ್ನು ಲೀಗ್‌ಗಳು ಮತ್ತು ಇತರ ವಿದೇಶಿ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಆಟಗಾರರಿಗೆ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನೀಡುವುದನ್ನು ನಿಲ್ಲಿಸಲಾಗಿದೆ ಎಂದು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಕೂಡ ಘೋಷಿಸಿದ್ದಾರೆ. ಈ ಆದೇಶ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ.

ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಭಾಗವಹಿಸಲಿರುವ ಏಳು ಪಾಕಿಸ್ತಾನಿ ಆಟಗಾರರಲ್ಲಿ ಬಾಬರ್ ಅಜಮ್ ಮತ್ತು ಶಾಹೀನ್ ಅಫ್ರಿದಿ ಸೇರಿದ್ದಾರೆ. ಐಎಲ್‌ಟಿ 20 ಲೀಗ್‌ನಲ್ಲಿ ಹರಾಜಿಗೆ 16 ಪಾಕಿಸ್ತಾನಿ ಆಟಗಾರರು ಸಹಿ ಹಾಕಿದ್ದಾರೆ. ಅವರೆಲ್ಲರೂ ಈಗ ಆ ಲೀಗ್‌ಗಳಲ್ಲಿ ಆಡುವ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಆದಾಗ್ಯೂ, ಕೆಲವು ಆಟಗಾರರು ಪಿಸಿಬಿಯ ನಿರ್ಧಾರವನ್ನು ಆಕ್ಷೇಪಿಸುತ್ತಿದ್ದಾರೆ ಎಂದು ವರದಿಯಾಗಿದೆ. ಭಾರತ ನೀಡಿದ ಹೊಡೆತದಿಂದ ಪಾಕಿಸ್ತಾನಿ ಆಟಗಾರರ ಆರ್ಥಿಕ ಸಂಪನ್ಮೂಲಗಳ ಮೇಲೆ ಪರಿಣಾಮ ಬೀರಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆಯುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net