

ಬೆಂಗಳೂರು: ಅಂತರ್ಜಲ ರಕ್ಷಣೆಗೆ, ನೀರಿನ ಸ್ವಾವಲಂಬನೆಗೆ ಕೆರೆಗಳ ಸಂರಕ್ಷಣೆಯಾಗಬೇಕೆಂಬ ಜನಪ್ರತಿನಿಧಿಗಳ ಆಶಯ ಬಾಯಿಮಾತಲ್ಲೇ ಉಳಿದಿದ್ದು, ಕೆರೆಗಳ ಒತ್ತುವರಿ ತೆರವು ಮರೀಚಿಕೆಯಾಗಿಯೇ ಉಳಿದಿದೆ. 2024ರ ನವೆಂಬರ್ ಅಂತ್ಯಕ್ಕೆ ಸರ್ಕಾರವೇ ಸಂಗ್ರಹಿಸಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟು 40,998 ಕೆರೆಗಳಿದ್ದು, ಇವುಗಳ ಪೈಕಿ 28,752 ಕೆರೆಗಳ ಸರ್ವೆಯಾಗಿದ್ದು, 12,246 ಕೆರೆಗಳಲ್ಲಿ ಅಳತೆ ಮಾಡಿಸಲು ಬಾಕಿ ಇದೆ. ಈಗ ಸರ್ವೆಯಾಗಿರುವ ಕೆರೆಗಳ ಪೈಕಿ 11,059 ಕೆರೆಗಳಲ್ಲಿ 34,981 ಎಕರೆ ಒತ್ತುವರಿ ಗುರುತಿಸಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯ, ಪ್ರಕೃತಿಯಲ್ಲಿನ ಬದಲಾವಣೆಯ ಬದಲಾವಣೆ ಕಾಣಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಘನಗಂಭೀರ ಬೇಸಿಗೆ ಎದುರಿಸಿ ಜನ ಜಾನುವಾರುಗಳಿಗೆ ನೀರಿನ ಅಭಾವ ಕಾಣಿಸಿದ್ದಿದೆ. ಅತಿವೃಷ್ಟಿಯಿಂದ ಅಲ್ಲೋಲಕಲ್ಲೋಲವಾಗಿದ್ದು ಇದೆ. ಇಂತಹ ಸಂದರ್ಭದಲ್ಲೆಲ್ಲಾ ನೆನಪಾಗುವುದು ಕೆರೆಗಳ ಬಗ್ಗೆಯೇ. ಕೆರೆಗಳ ಸಂರಕ್ಷಣೆ ಮಾಡಿದರೆ ಆಪತ್ತುಗಳನ್ನು ಕಡಿಮೆ ಮಾಡಿಕೊಳ್ಳಬಹುದೆಂಬ ಮಾತುಗಳು ತಜ್ಞರಿಂದ, ಜನಪ್ರತಿನಿಧಿಗಳಿಂದ ಕೇಳಿಬರುತ್ತದೆ. ಆದರೆ ರಾಜ್ಯದಲ್ಲಿ ಗಣನೀಯ ಸಂಖ್ಯೆಯಲ್ಲಿ ಕೆರೆಗಳಿದ್ದರೂ ಅವುಗಳ ರಕ್ಷಣೆ ಬಗ್ಗೆ ಪ್ರಯತ್ನ ಸಾಲದೆಂಬುದಕ್ಕೆ ಸರ್ಕಾರದ ಹೊಸ ಅಂಕಿ ಅಂಶಗಳೇ ಸಾಕ್ಷಿ.
ಕೆರೆ ಒತ್ತುವರಿ ಬಗ್ಗೆ ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ದಿನಗಟ್ಟಲೆ ಚರ್ಚೆಯಾಗಿದ್ದಿದೆ. ನ್ಯಾಯಾಲಯ ಕಟ್ಟಪ್ಪಣೆ ಹೊರಡಿಸಿದ ಪ್ರಕರಣವೂ ಇದೆ. ಇಷ್ಟರ ನಡುವೆ ರಾಜ್ಯದಲ್ಲಿ ಕೆರೆ ಒತ್ತುವರಿ ತೆರವಿಗೆ ಆಂದೋಲ ರೂಪ ಕೊಡಲಾಯಿತು. ಆದರೆ, ಅದರ ವೇಗ ದಿನ ಕಳೆದಂತೆ ಆಮೆ ವೇಗ ಪಡೆದುಕೊಂಡಿದೆ.
ಕಳೆದ ಮೂರು ವರ್ಷದಿಂದ ಒತ್ತುವರಿ ತೆರವುಗೊಳಿಸಿರುವ ನಿಖರ ವಿವರ ನೀಡುವಂತೆ ಸಣ್ಣ ನೀರಾವರಿ ಇಲಾಖೆ ಕಂದಾಯ ಇಲಾಖೆಗೆ ಕೋರಿಕೆ ಸಲ್ಲಿಸಿದೆ. ಈ ಮೂಲಕ ಕೆರೆ ಬಗ್ಗೆ ಖಚಿತ ಮಾಹಿತಿಯೂ ಸರ್ಕಾರದ ಬಳಿ ಇಲ್ಲ ಎಂಬುದು ಬಹಿರಂಗವಾಗಿದೆ.
ಹಾಗೆಯೇ, ಜಿಲ್ಲೆಗಳ ವ್ಯಾಪ್ತಿಯಲ್ಲಿ ಬಾಕಿ ಇರುವ ಕೆರೆಗಳ ಒತ್ತುವರಿ ಗುರುತಿಸಿ ನಿಯಮಾನುಸಾರ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ನವೆಂಬರ್‌ನಲ್ಲಿ ಸೂಚನೆ ಕಳಿಸಲಾಗಿದೆ.
ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಕೆರೆ ಸಂಜೀವಿನಿ ಯೋಜನೆಯನ್ನು 2017-18ನೇ ಸಾಲಿನಿಂದ ಜಾರಿಗೊಳಿಸಿದ್ದು, ಇಲ್ಲಿಯವರೆಗೂ ಸರ್ಕಾರದಿಂದ ಹಂಚಿಕೆಯಾಗುವ ಅನುದಾನಕ್ಕೆ ಕ್ರಿಯಾಯೋಜನೆ ರೂಪಿಸಿ ರೈತರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಕೆರೆ ಅಂಗಳದ ಹೂಳನ್ನು ಜೆಸಿಬಿ, ಹಿಟಾಚಿ ಯಂತ್ರಗಳ ಮೂಲಕ ತೆಗೆಸಿ ರೈತರ ವಾಹನಗಳಿಗೆ ಉಚಿತವಾಗಿ ತುಂಬಿಕೊಡಲು ಅವಕಾಶ ಇರುತ್ತದೆ.
ಕಳೆದ ಎರಡು ವರ್ಷಗಳಲ್ಲಿ ಅಂದರೆ 2022-23ರಲ್ಲಿ 288 ಕೆರೆಗಳಲ್ಲಿರುವ ಹೂಳೆತ್ತಲು ಯೋಜಿಸಿದ್ದು, 698 ಲಕ್ಷ ಮೊತ್ತ ನಿಗದಿಯಾಗಿತ್ತು. ಅದರಲ್ಲಿ 147 ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ಪೂರ್ಣಗೊಂಡಿದೆ. 2023ರಲ್ಲಿ 31 ಕಾಮಗಾರಿಗಳಿಗೆ 61 ಲಕ್ಷ ಮೊತ್ತದಲ್ಲಿ ಹೂಳೆತ್ತಲು ಯೋಜಿಸಿದ್ದು, 119 ಕಾಮಗಾರಿ ಪೂರ್ಣಗೊಂಡಿದೆ. ಈ ಮೂಲಕ ಸಣ್ಣ ಗುರಿಯೂ ಸಹ ಮುಟ್ಟಿಲ್ಲ.
ಸಣ್ಣ ನೀರಾವರಿ ಇಲಾಖೆಯಡಿ ಬರುವ ಕೆರೆಗಳ ಪೈಕಿ ಒತ್ತುವರಿ ತೆರವುಗೊಂಡ ಕಡೆ ಕೆರೆಗಳಿಗೆ ಬಯೋ ೆನ್ಸಿಂಗ್ ಅಳವಡಿಸಲು ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಕ್ರಮಕೈಗೊಳ್ಳಲು ಸರ್ಕಾರ ಬಯಸಿದೆ.
ಬಯೋ ೆನ್ಸಿಂಗ್ ಎಂದರೆ ಜೈವಿಕ ಬೇಲಿ ಅಥವಾ ಲೈವ್ ಫೆನ್ಸಿಂಗ್ ಎಂದೂ ಕರೆಯುವುದುಂಟು. ಮರ, ಮುಳ್ಳುತಂತಿ ಅಥವಾ ಕಲ್ಲುಗಳನ್ನು ಬಳಸಿ ಕೆರೆಗೆ ತಡೆಗೋಡೆ ನಿರ್ಮಿಸುವುದು ವೆಚ್ಚದಾಯಕ. ಇದೇ ಕಾರಣಕ್ಕೆ ಅರಣ್ಯ ಇಲಾಖೆ ನೆರವು ಪಡೆದು ಒಂದೇ ಜಾತಿಯ ಸಸ್ಯಗಳನ್ನು ಬೆಳೆಸುವ ಮೂಲಕ ಗಡಿ ನಿರ್ಮಿಸಲು ಉದ್ದೇಶಿಸಲಾಗಿದೆ.